ಬಿಸಿಸಿಐಯಿಂದ ರತ್ನಾಕರ್ ಶೆಟ್ಟಿ, ಶ್ರೀಧರ್‌ಗೆ ಗೇಟ್‌ಪಾಸ್?

Update: 2017-01-18 17:38 GMT

 ಮುಂಬೈ, ಜ.18: ಈಗಾಗಲೆ ತಮ್ಮ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ 9ಕ್ಕೂ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಧಾನ ಪ್ರಬಂಧಕ ಹಾಗೂ ಆಡಳಿತಾಧಿಕಾರಿ ರತ್ನಾಕರ್ ಶೆಟ್ಟಿ ಹಾಗೂ ಕ್ರಿಕೆಟ್ ಆಪರೇಶನ್‌ನ ಜನರಲ್ ಮ್ಯಾನೇಜರ್ ಎಂವಿ ಶ್ರೀಧರ್‌ರನ್ನು ಹುದ್ದೆಯಲ್ಲಿ ಉಳಿಸಿಕೊಳ್ಳುವ ಬಗ್ಗೆ ಬಿಸಿಸಿಐ ಸವಾಲು ಎದುರಿಸುತ್ತಿದೆ.

ಲೋಧಾ ಸಮಿತಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಶಿಫಾರಸಿನ ಪ್ರಕಾರ ಓರ್ವ ಅಧಿಕಾರಿ 9 ವರ್ಷಗಳ ಕಾಲ ರಾಜ್ಯ ಸಂಸ್ಥೆಯಲ್ಲಿ ಸೇವೆಸಲ್ಲಿಸಿದ್ದರೆ, ಆತ ಆ ಹುದ್ದೆಯಲ್ಲಿ ಮುಂದುವರಿಲು ಅನರ್ಹ ಎಂದು ಹೇಳಲಾಗಿತ್ತು. ಶೆಟ್ಟಿ ಹಾಗೂ ಶ್ರೀಧರ್ ಉದ್ಯೋಗಿಗಳೆಂಬ ನೆಲೆಯಲ್ಲಿ ಬಿಸಿಸಿಐನಲ್ಲಿ ಮುಂದುವರಿದಿದ್ದಾರೆ.

ಭಾರತೀಯ ಕ್ರಿಕೆಟ್‌ನ ಹಿರಿಯ ಆಡಳಿತಗಾರ ಶೆಟ್ಟಿ 1996ರ ಸೆಪ್ಟಂಬರ್‌ನಿಂದ 2005ರ ಎಪ್ರಿಲ್‌ನ ತನಕ ಮುಂಬೈ ಕ್ರಿಕೆಟ್ ಸಂಸ್ಥೆಯ ಜೊತೆ-ಕಾರ್ಯದರ್ಶಿಯಾಗಿದ್ದರು. ಆ ಬಳಿಕ 2005-06 ಹಾಗೂ 2010-11ರಲ್ಲಿ ಸಂಸ್ಥೆಯ ಖಜಾಂಚಿಯಾಗಿದ್ದರು. 2011ರ ಜುಲೈನಿಂದ 2012ರ ಆಗಸ್ಟ್‌ನ ತನಕ ಎಂಸಿಎ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಶೆಟ್ಟಿ ಬಿಸಿಸಿಐ ಮಾಜಿ ಜೊತೆ ಕಾರ್ಯದರ್ಶಿ ಆಗಿದ್ದವರು.

ಶ್ರೀಧರ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಯಲ್ಲಿ 2000-06ರ ತನಕ ಜೊತೆ ಕಾರ್ಯದರ್ಶಿಯಾಗಿಯೂ, 2009-10 ಹಾಗೂ 2012-14ರಲ್ಲಿ ರಾಜ್ಯ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

 ರಾಜ್ಯ ಸಂಸ್ಥೆಗಳಲ್ಲಿ 9 ಹಾಗೂ ಅದಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳು ಹುದ್ದೆಯಲ್ಲಿ ಮುಂದುವರಿಯುಂತಿಲ್ಲ ಎಂದು ಸುಪ್ರೀಂಕೋರ್ಟ್ ಜ.2 ಹಾಗೂ 3ರಂದು ನೀಡಿರುವ ಮಹತ್ವದ ಆದೇಶದಲ್ಲಿ ತಿಳಿಸಿತ್ತು.

ಶ್ರೀಧರ್ ಹಾಗೂ ಶೆಟ್ಟಿ ಯಾವ ಆಧಾರದಲ್ಲಿ ಬಿಸಿಸಿಐನಲ್ಲಿ ಇನ್ನೂ ಉಳಿದಿದ್ದಾರೆ? ಈ ಇಬ್ಬರು ಕ್ರಮವಾಗಿ ಹೈದರಾಬಾದ್ ಹಾಗೂ ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿ 9 ವರ್ಷ ಪೂರೈಸಿದ್ದಾರೆ. ಸುಪ್ರೀಂಕೋರ್ಟ್‌ನ ಆದೇಶ ಹಾಗೂ ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಇವರಿಬ್ಬರು ಬಿಸಿಸಿಐನಲ್ಲಿ ಇರುವಂತಿಲ್ಲ. ಇದು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರ ಕೋರ್ಟ್ ಆದೇಶದ ಉಲ್ಲಂಘನೆಯಲ್ಲವೇ? ಎಂದು ಬಿಸಿಸಿಐ ಮಾಜಿ ಪದಾಧಿಕಾರಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News