ಫೆಡರರ್,ವಾವ್ರಿಂಕ, ಮರ್ರೆ, ಮುಗುರುಝ ಮೂರನೆ ಸುತ್ತಿಗೆ ತೇರ್ಗಡೆ

Update: 2017-01-18 17:54 GMT

  ಮೆಲ್ಬೋರ್ನ್, ಜ.18: ಸ್ವಿಸ್‌ನ ರೋಜರ್ ಫೆಡರರ್, ಸ್ಟಾನ್ ವಾವ್ರಿಂಕ, ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾದರು.

ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ 17 ಬಾರಿಯ ಗ್ರಾನ್‌ಸ್ಲಾಮ್ ಮಾಸ್ಟರ್ ಫೆಡರರ್ 200ನೆ ರ್ಯಾಂಕಿನ ಅಮೆರಿಕದ ಎನ್. ರುಬಿನ್‌ರನ್ನು 7-5, 6-3, 7-6(7/3) ಸೆಟ್‌ಗಳ ಅಂತರದಿಂದ ಮಣಿಸಿದರು.

ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೀಯದ ಜುರ್ಗನ್ ಮೆಲ್ಝರ್‌ರನ್ನು ಮಣಿಸಿದ ಬಳಿಕ ಫೆಡರರ್ ಈ ವರ್ಷ ದಾಖಲಿಸಿದ 2ನೆ ಗೆಲುವು ಇದಾಗಿದೆ.

ಫೆಡರರ್ ಮೂರನೆ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.

 2014ರ ಚಾಂಪಿಯನ್ ವಾವ್ರಿಂಕ ಅಮೆರಿಕದ ಸ್ಟೀವ್ ಜಾನ್ಸನ್ ವಿರುದ್ಧ 6-3, 6-4, 6-4 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು.

1 ಗಂಟೆ, 52 ನಿಮಿಷಗಳ ಹೋರಾಟದಲ್ಲಿ ಗೆಲುವು ಸಾಧಿಸಿರುವ ನಾಲ್ಕನೆ ಶ್ರೇಯಾಂಕದ ವಾವ್ರಿಂಕ ಮುಂದಿನ ಸುತ್ತಿನಲ್ಲಿ ಸರ್ಬಿಯದ ವಿಕ್ಟರ್ ಟ್ರಾಸ್ಕಿ ಅಥವಾ ಇಟಲಿಯ ಪಾಲೊ ಲೊರೆಂಝಿ ಅವರನ್ನು ಎದುರಿಸಲಿದ್ದಾರೆ.

ವಾವ್ರಿಂಕ ಮೂರು ವರ್ಷಗಳ ಹಿಂದೆ ಮೆಲ್ಬೋರ್ನ್‌ನಲ್ಲಿ ರಫೆಲ್ ನಡಾಲ್‌ರನ್ನು ಮಣಿಸಿ ಚಾಂಪಿಯನ್ ಆಗಿದ್ದರು.1993ರ ಬಳಿಕ ಅಗ್ರ ಶ್ರೇಯಾಂಕದ ಆಟಗಾರನನ್ನು ಮಣಿಸಿ ಪ್ರಶಸ್ತಿ ಜಯಿಸಿದ ಮೊದಲ ಸ್ಪೇನ್ ಆಟಗಾರ ಎನಿಸಿಕೊಂಡಿದ್ದರು.

ವಾವ್ರಿಂಕ 2015ರಲ್ಲಿ ಫ್ರೆಂಚ್ ಓಪನ್ ಹಾಗೂ ಕಳೆದ ವರ್ಷದ ಯುಎಸ್ ಓಪನ್ ಜಯಿಸಿದ್ದರು. ಈ ಎರಡು ಸಂದರ್ಭದಲ್ಲಿ ನೊವಾಕ್ ಜೊಕೊವಿಕ್‌ರನ್ನು ಮಣಿಸಿದ್ದರು.

ಮರ್ರೆ 3ನೆ ಸುತ್ತಿಗೆ ಲಗ್ಗೆ: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ರಶ್ಯದ ಯುವ ಆಟಗಾರ ಆ್ಯಂಡ್ರೆ ರುಬ್ಲೆವ್‌ರನ್ನು 6-3, 6-0, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಒಂದು ಗಂಟೆ, 37 ನಿಮಿಷಗಳ ಹೋರಾಟದಲ್ಲಿ ಜಯಶಾಲಿಯಾಗಿರುವ ಮರ್ರೆ ಮುಂದಿನ ಸುತ್ತಿನಲ್ಲಿ ಅಮೆರಿಕದ ಸ್ಯಾಮ್ ಕ್ವಾರ್ರೆ ಅವರನ್ನು ಎದುರಿಸಲಿದ್ದಾರೆ.

ಆ್ಯಂಡ್ರೆ ಕುಝ್ನೆಸೋವ್‌ರನ್ನು 6-3, 6-4, 6-3 ಸೆಟ್‌ಗಳ ಅಂತರದಿಂದ ಸೋಲಿಸಿರುವ ಜಪಾನ್‌ನ ಕೀ ನಿಶಿಕೊರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೆ ಸುತ್ತು ತಲುಪಿದರು. 2 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ನಿಶಿಕೊರಿ ಅವರು ಫ್ರೆಂಚ್‌ನ ಕುಝ್ನೆಸೋವ್‌ರನ್ನು ಸತತ ನಾಲ್ಕನೆ ಬಾರಿ ಸೋಲಿಸಿದರು. ಈ ಮೂಲಕ ಸತತ ಏಳನೆ ಬಾರಿ ಮೆಲ್ಬೋರ್ನ್‌ನಲ್ಲಿ ಮೂರನೆ ಸುತ್ತು ತಲುಪಿದರು.

ನಿಶಿಕೊರಿ 3 ಬಾರಿ ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದರು. 2012ರಲ್ಲಿ ಮರ್ರೆ, 2015ರಲ್ಲಿ ವಾವ್ರಿಂಕ ಹಾಗೂ ಕಳೆದ ವರ್ಷ ನೊವಾಕ್ ಜೊಕೊವಿಕ್ ಗೆ ಶರಣಾಗಿದ್ದರು.

ಬೆಲ್ಜಿಯಂನ ಸ್ಟೀವ್ ಡಾರ್ಸಿಸ್‌ರನ್ನು 3 ಗಂಟೆ, 9 ನಿಮಿಷಗಳ ಹೋರಾಟದಲ್ಲಿ 1-6, 6-7, 6-4, 6-2,10-8 ಸೆಟ್‌ಗಳಿಂದ ಮಣಿಸಿದ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ 2 ವರ್ಷಗಳ ಹಿಂದಿನ 5 ಸೆಟ್‌ಗಳ ಅಂತರದ ಸೋಲಿಗೆ ಸೇಡು ತೀರಿಸಿಕೊಂಡರು.

ಮುಗುರುಝ ಮೂರನೆ ಸುತ್ತಿಗೆ: ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸಮಂತಾ ಕ್ರಾಫೋರ್ಡ್‌ರನ್ನು 7-5, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ ಗಾರ್ಬೈನ್ ಮುಗುರುಝ ಮೂರನೆ ಸುತ್ತಿಗೆ ತಲುಪಿದರು.

ಸ್ಪೇನ್‌ನ ಹಾರ್ಡ್ ಹಿಟ್ಟಿಂಗ್ ಆಟಗಾರ್ತಿ ಮುಗುರುಝ ಮುಂದಿನ ಸುತ್ತಿನಲ್ಲಿ ಲಾಟ್ವಿಯದ ಅನಸ್ಟೇಸಿಜಾ ಸೇವಾಸ್ಟೋವಾರನ್ನು ಎದುರಿಸಲಿದ್ದಾರೆ. 

ಸಾನಿಯಾ ಹಾಗೂ ಬೋಪಣ್ಣ ಜೋಡಿ ದ್ವಿತೀಯ ಸುತ್ತಿಗೆ

 ಮೆಲ್ಬೋರ್ನ್, ಜ.18: ಭಾರತದ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು.

ಬುಧವಾರ ಇಲ್ಲಿ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಝಾ ಹಾಗೂ ಝೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೈಕೋವಾ ಅವರು ಬ್ರಿಟನ್ ಜೋಡಿ ಜೊಸಿಲಿನ್ ರಾಯ್ ಹಾಗೂ ಅನ್ನಾ ಸ್ಮಿತ್‌ರನ್ನು 6-3, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.

ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಅವರು ಉರುಗ್ವೆ ಜೊತೆಗಾರ ಪಾಬ್ಲೊ ಕ್ಯೂವಾಸ್ ಅವರು ಬ್ರೆಝಿಲ್‌ನ ಥಾಮಸ್ ಬೆಲ್ಲುಸ್ಸಿ ಹಾಗೂ ಅರ್ಜೆಂಟೀನದ ಮ್ಯಾಕ್ಸಿಮೊ ಗಾಂಝಲೆಝ್‌ರನ್ನು 6-4, 7-6(4) ಸೆಟ್‌ಗಳ ಅಂತರದಿಂದ ಸೋಲಿಸಿದರು.

ಬೋಪಣ್ಣ-ಪಾಬ್ಲೊ ಜೋಡಿ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ಅಲೆಕ್ಸ್ ಬೋಲ್ಟ್ ಹಾಗೂ ಬಾಡ್ಲಿ ವೌಸ್ಲೆ ಜೋಡಿಯನ್ನು ಎದುರಿಸಲಿದೆ. ಬೋಲ್ಟ್-ವೌಸ್ಲೆ ಜೋಡಿ ರಾಬಿನ್ ಹಾಸೆ ಹಾಗೂ ಫ್ಲಾರಿಯನ್ ಮಯೆರ್‌ರನ್ನು 6-3, 5-7, 6-4 ಸೆಟ್‌ಗಳ ಅಂತರದಿಂದ ಸೋಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News