ಘನ ವಾಹನಗಳ ಸಂಚಾರ ನಿಷೇಧಕ್ಕೆ ಸೂಕ್ತ ಕ್ರಮ: ಆಗ್ರಹ

Update: 2017-01-18 18:46 GMT

ಮೂಡುಬಿದಿರೆ, ಜ.18: ಪೇಟೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ರಾಜಾರೋಷವಾಗಿ ಘನವಾಹನ ಗಳು ಓಡಾಡುತ್ತಿವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಟ್ರಾಫಿಕ್ ಸಮಸ್ಯೆಗಳು ದ್ವಿಗುಣಗೊಳ್ಳುತ್ತಿದೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸದಸ್ಯ ಸುರೇಶ್ ಕೋಟ್ಯಾನ್ ಪುರಸಭಾವೇಶನದಲ್ಲಿ ಆಗ್ರಹಿಸಿದ್ದಾರೆ.

ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಘನ ವಾಹನಗಳ ಸಂಚಾರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಲಾಗುವುದು ಎಂದು ಮುಖ್ಯಾಕಾರಿ ಶೀನ ನಾಯ್ಕಾ ತಿಳಿಸಿದರು. ಮನೆ ಹಾಗೂ ವಾಣಿಜ್ಯ ತೆರಿಗೆಯನ್ನು ಪರಿಷ್ಕರಣೆ ಮಾಡುವಲ್ಲಿ ಪುರಸಭೆೆ ಆತುರದ ನಿರ್ಧಾರ ಮಾಡುವುದು ಬೇಡ. ಇತರ ಸ್ಥಳೀಯಾಡಳಿತಗಳಲ್ಲಿರುವ ತೆರಿಗೆ ದರವನ್ನು ಪರಿಶೀಲಿಸಿ, ಮೂಡುಬಿದಿರೆ ನಾಗರಿಕರಿಗೆ ಹೊರೆಯಾಗದಂತೆ ತೆರಿಗೆ ನೀತಿ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾದ ಮೇಲೆ ಕ್ರಮಕೈಗೊಳ್ಳುವಂತೆ ಕೆಲವು ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದಾಗ, ತೆರಿಗೆ ಪರಿಷ್ಕರಣೆ ಮಾಡುವುದರ ಬದಲು ಉದ್ದಿಮೆ ಪರವಾನಿಗೆ ಇಲ್ಲದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ವ್ಯಾಪಾರಸ್ಥರು ಪರವಾನಿಗೆ ಮಾಡಿದರೆ ಪುರಸಭೆ ಆದಾಯವನ್ನು ಹೆಚ್ಚಿಸಬಹುದು ಎಂದು ಲಕ್ಷ್ಮಣ ಪೂಜಾರಿ ಸಲಹೆ ನೀಡಿದರು.

 ಪೇ ಪಾರ್ಕಿಂಗ್ ವ್ಯವಸ್ಥೆಯು ಕೇವಲ ಹೆಸರಿಗೆ ಎಂಬಂತಾಗಿದೆ. ಬಹುಮಹಡಿ ಕಟ್ಟಡಗಳು ಅಂತಸ್ತನ್ನು ಏರಿಕೆ ಮಾಡುತ್ತಿದೇಯೇ ವಿನಃ ಪಾರ್ಕಿಂಗ್‌ನಂತಹ ಮೂಲಭೂತ ಆವಶ್ಯಕತೆಗಳಿಗೆ ಗಮನಹರಿಸುತ್ತಿಲ್ಲ. ಲಾಭವನ್ನೇ ನೋಡುವ ಪುರಸಭೆೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸೋಲುತ್ತಿದೆ. ಅಕ್ರಮ ಕಟ್ಟಡಗಳಿಗೂ ಯಾವುದೇ ಕ್ರಮವಿಲ್ಲ ಎಂದು ಸದಸ್ಯರು ಆರೋಪಿಸಿದ್ದರು. ಹಿಂದೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣವಾಗಿರುವುದು ನಿಜ. ಆದರೆ ಈಗ ಕಟ್ಟು ನಿಟ್ಟಾಗಿ ನಿಯಮವನ್ನು ಪಾಲಿಸುತ್ತಿದ್ದೇವೆ ಎಂದು ಮುಖ್ಯಾಕಾರಿ ಸ್ಪಷ್ಟನೆ ನೀಡಿದರು.

ತಹಶೀಲ್ದಾರ್ ಕಚೇರಿ ಬಳಿಯಿಂದ ಬಸ್ ನಿಲ್ದಾಣದವರೆಗೆ ವಿಭಜಕ ಅಳವಡಿಸುವಂತೆ ಹಿಂದೆ ಸಲಹೆ ನೀಡಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಬಾಹುಬಲಿ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

  ಉಪಾಧ್ಯಕ್ಷ ವಿನೋದ್ ಸೆರಾವೊ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಪರಿಸರ ಅಕಾರಿ ಶಿಲ್ಪಾ, ದಿನೇಶ್ ಸಭೆೆಯಲ್ಲಿದ್ದರು. ಕಚೇರಿ ವ್ಯವಸ್ಥಾಪಕ ಸೂರ್ಯಕಾಂತ ಖಾರ್ವಿ, ಪ್ರಥಮ ದರ್ಜೆ ಸಹಾಯಕಿ ಯಶಸ್ವಿನಿ ಹಾಗೂ ಸದಸ್ಯರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News