ಗಿಳಿವಿಂಡು ಸಾಂಸ್ಕೃತಿಕ ಕೇಂದ್ರ ಇಂದು ಲೋಕಾರ್ಪಣೆ

Update: 2017-01-18 18:49 GMT

ಮಂಜೇಶ್ವರ, ಜ.18: ರಾಷ್ಟ್ರಕವಿ ಗೋವಿಂದ ಪೈ ಹೆಸರಿನಲ್ಲಿ ನಿರ್ಮಿಸಿರುವ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಜ್ಜಾಗಿದೆ. ಕವಿ ನಿವಾಸ ಹಾಗೂ ಭವನಿಕಾ ರಂಗ ಮಂದಿರದ ಉದ್ಘಾಟನೆ ಜ.19ರಂದು ಸಂಜೆ ನಡೆಯಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಿಳಿವಿಂಡು ಯೋಜನೆಯನ್ನು ಲೋಕಾರ್ಪಣೆಗೊಳಿಸಿದರೆ ಭವನಿಕಾ ಸಭಾಂಗಣವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಗಿಳಿವಿಂಡು ಯೋಜನೆ: ಸಾಹಿತ್ಯ , ಕಲೆ , ಸಂಸ್ಕೃತಿಯ ಬಗ್ಗೆ ಅಪಾರ ಸಂಶೋಧನೆಗಳನ್ನು ಮಾಡಿರುವ ಗೋವಿಂದ ಪೈಯವರ ಕೊಡುಗೆಗಳನ್ನು ಮುಂದಿನ ತಲೆಮಾರಿಗೆ ತಿಳಿಸಲು, ಅವುಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ಸ್ಮರಿಸುವುದಕ್ಕಾಗಿ ಮಂಜೇಶ್ವರದಲ್ಲಿರುವ ಪೈ ನಿವಾಸವನ್ನು ನವೀಕರಿಸಿ ಸ್ಮಾರಕವನ್ನಾಗಿಸಲಾಗಿದೆ. ಇದಕ್ಕೆ ಅವರ ಪ್ರಮುಖ ಕೃತಿಗಳಲ್ಲೊಂದಾದ ‘ಗಿಳಿವಿಂಡು’ ಎಂಬ ಹೆಸರಿನ್ನಿಡಲಾಗಿದೆ. ಸುಮಾರು 1.83 ಎಕರೆ ಭೂಮಿಯಲ್ಲಿ ತಲೆ ಎತ್ತಿ ನಿಂತಿರುವ ಯೋಜನೆಯ ಕವಿ ನಿವಾಸದಲ್ಲಿ ಭವನಿಕಾ ಸಭಾಗೃಹ, ಬಯಲು ರಂಗ ಮಂದಿರ, ಒಳಾಂಗಣ ರಂಗ ಮಂದಿರ, ಪ್ರಸಾದನ ಕೊಠಡಿ, ಚಿತ್ರಶಿಲ್ಪ ಕಲಾ ಪ್ರದರ್ಶನ, ಯಕ್ಷಗಾನ ಜಾನಪದ ಕೇಂದ್ರ, ಗ್ರಂಥ ಭಂಡಾರ, ಸಂಶೋಧನೆ, ಅಧ್ಯಯನ, ಹಸ್ತಪ್ರತಿಗಳ ವಿಭಾಗ, ಆಧುನಿಕ ತಂತ್ರಜ್ಞಾನ, ಪ್ರಾಚೀನ ಸಾಹಿತ್ಯ ಅಧ್ಯಯನ ವಿಭಾಗಗಳನ್ನು ಒಳಗೊಂಡಿದೆ. ಕೇಂದ್ರದ ಮಾಜಿ ಸಚಿವ ಸಂಸದ ಎಂ.ವೀರಪ್ಪ ಮೊಯ್ಲಿ ಸಾರಥ್ಯದ ತಂಡದ ಅವಿರತ ಪ್ರಯತ್ನ ಹಾಗೂ ಶ್ರಮದ ಲದಿಂದಾಗಿ ಇಲ್ಲಿನ ಸಾಹಿತ್ಯ ಪ್ರೇಮಿಗಳ ಬಹು ದೊಡ್ಡ ಕನಸಾಗಿರುವ ಗಿಳಿವಿಂಡು ಯೋಜನೆ ಇದೀಗ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ.

ಯಕ್ಷಗಾನ ಮ್ಯೂಸಿಯಂ

‘ಗಿಳಿವಿಂಡು’ವಿನಲ್ಲಿ ಯಕ್ಷಗಾನಕ್ಕಾಗಿ ವಿಶೇಷ ಮ್ಯೂಸಿಯಂ ಒಂದನ್ನು ಸಿದ್ಧಪಡಿಸಲಾಗಿದೆ. ಹಿರಿಯ ಕಲಾವಿದರ ಛಾಯಾಚಿತ್ರಗಳು, ವಿವಿಧ ಯಕ್ಷ ವೇಷಗಳು, ಕಲಾಕೃತಿಗಳು, ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಸುಮಾರು 10 ಖ್ಯಾತ ಯಕ್ಷಗಾನ ಕಲಾವಿ ದರ ಏಳು ಅಡಿ ಎತ್ತರದ ಪ್ರತಿಕೃತಿಗಳನ್ನು ಈ ಕೇಂದ್ರ ದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ಪ್ರಸಿದ್ಧ ಯಕ್ಷಗಾನ ಕಲಾವಿದರ ಭಾವಚಿತ್ರ ಮತ್ತು ಅವರ ವಿವರಗಳನ್ನೊಳಗೊಂಡಿರುವ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಯಕ್ಷಗಾನದ ಬಗ್ಗೆ ಸಂಶೋಧನೆ ಮಾಡುವ ಸಂಶೋಧನಾ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಮ್ಯೂಸಿಯಂನ್ನು ಸಜ್ಜುಗೊಳಿಸಲಾಗಿದೆ. ಪೈ ನಿವಾಸದ ಛಾವಡಿ ಯಲ್ಲಿ 6 ಅಡಿ ಎತ್ತರದ ಗೋವಿಂದ ಪೈಯವರ ಪ್ರತಿಮೆ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News