ಜಿಎಸ್‌ಟಿ: 2 ಕೋಟಿ ತೆರಿಗೆ ವಂಚಿಸಿದರೆ ಬಂಧನ
ಹೊಸದಿಲ್ಲಿ, ಜ.19: ಸಂಗ್ರಹಗೊಂಡ ತೆರಿಗೆಯನ್ನು ನಿಗದಿತ ಅವಧಿಯಲ್ಲಿ ಸರಕಾರದ ಬೊಕ್ಕಸಕ್ಕೆ ಜಮೆ ಮಾಡದಿರುವುದು ಮತ್ತು ತೆರಿಗೆ ವಂಚನೆ- ಈ ಪ್ರಕರಣಗಳಲ್ಲಿ ಜಾಮೀನು ಲಭ್ಯ ಬಂಧನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸಮಿತಿಯ ಅಂತಿಮ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಿಎಸ್‌ಟಿಯನ್ನು ಆದಷ್ಟು ಸರಳಗೊಳಿಸುವ ಉಪಕ್ರಮವಾಗಿ, ಕಾಯ್ದೆಯಲ್ಲಿ ಇರುವ ಶಿಕ್ಷೆಯ ಷರತ್ತಿನಲ್ಲಿ ಸ್ವಲ್ಪ ಸಡಿಲಗೊಳಿಸಲಾಗಿದೆ. ಇದರಂತೆ ವ್ಯಾಪಾರಿಯೋರ್ವ 2 ಕೋಟಿಯಷ್ಟು ತೆರಿಗೆ ತಪ್ಪಿಸಿರುವುದು ಕಂಡು ಬಂದರೆ ಆತ ತಕ್ಷಣ ಜಾಮೀನು ಲಭ್ಯವಿರು ಅಪರಾಧಕ್ಕೆ ಬಾಧ್ಯನಾಗುತ್ತಾನೆ. ಇದೇ ರೀತಿಯ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆ(ಐಪಿಸಿ)ಯಲ್ಲಿ ವಿಧಿಸಲಾಗಿರುವ ಶಿಕ್ಷೆಗಿಂತ ಜಿಎಸ್‌ಟಿಯಲ್ಲಿ ವಿಧಿಸಲಾಗಿರುವ ಶಿಕ್ಷೆ ಸರಳವಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಐಪಿಸಿ 1860 ಕಾಯ್ದೆ ಪ್ರಕಾರ ವಂಚನೆ ಮತ್ತು ಮೋಸ ಜಾಮೀನು ರಹಿತ ಅಪರಾಧವಾಗಿದ್ದು ಇಲ್ಲಿ ಕೋರ್ಟ್ ಮಾತ್ರ ಜಾಮೀನು ನೀಡಬಹುದು. ಆದರೆ ಜಿಎಸ್‌ಟಿಯಲ್ಲಿ 50 ಲಕ್ಷಕ್ಕೂ ಹೆಚ್ಚಿನ ತೆರಿಗೆ ಸಂಗ್ರಹಿಸಿ ಅದನ್ನು ಸರಕಾರದ ಖಜಾನೆಗೆ ಪಾವತಿಸದಿದ್ದರೆ ಅಂತಹ ಸಂದರ್ಭದಲ್ಲಿ ಬಂಧನಕ್ಕೆ ಅವಕಾಶವಿದೆ. ತಪ್ಪೆಸಗಿರುವುದು ಕಂಡು ಬಂದರೆ ಅಂತಹ ವ್ಯಕ್ತಿಗಳನ್ನು ಬಂಧಿಸುವ ಅಧಿಕಾರವನ್ನು ಆದಾಯ ತೆರಿಗೆ ಆಯುಕ್ತರ ವಿವೇಚನೆಗೆ ಬಿಡಲಾಗಿದೆ.
ಆದರೆ ಇದು ವ್ಯಾಪಾರಿಗಳಿಗೆ ಅನವಶ್ಯಕ ಪೀಡನೆಯಾಗಬಹುದು . ಅಧಿಕಾರಿಗಳ ವಿವೇಚನೆಗೆ ಎಂಬ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುವ ಸಂಭವ ಹೆಚ್ಚಾಗಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.