×
Ad

‘ಬಂದಿ’ಗಳಾದರು ವಿತ್ತ ಸಚಿವಾಲಯದ 100 ಸಿಬ್ಬಂದಿ!

Update: 2017-01-19 23:38 IST

ಹೊಸದಿಲ್ಲಿ,ಜ.19: ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ದೊಂದಿಗೆ ಕೇಂದ್ರ ಸರಕಾರದ 2017-18ನೆ ಸಾಲಿನ ಮುಂಗಡಪತ್ರ ಮುದ್ರಣ ಕಾರ್ಯ ಇಂದಿನಿಂದ ಆರಂಭಗೊಂಡಿತು. ವಿತ್ತಸಚಿವ ಅರುಣ್ ಜೇಟ್ಲಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸುದೀರ್ಘ ಕಾಲದಿಂದ ನಡೆದುಕೊಂಡು ಬಂದಿರುವ ಈ ಕಾರ್ಯಕ್ರಮದಲ್ಲಿ ದೊಡ್ಡ ಕಡಾಯಿಯಲ್ಲಿ ಹಲ್ವಾ ತಯಾರಿಸಿ ಸಚಿವಾಲಯದ ಎಲ್ಲ ಸಿಬ್ಬಂದಿಗೆ ವಿತರಿಸಲಾಯಿತು.
ಹಲ್ವಾ ವಿತರಿಸಿದ ಬಳಿಕ ಮುಂಗಡಪತ್ರ ತಯಾರಿಕೆ ಮತ್ತು ಮುದ್ರಣ ಕಾರ್ಯದಲ್ಲಿ ನೇರವಾಗಿ ಪಾಲ್ಗೊಂಡಿರುವ ನೂರಕ್ಕೂ ಅಧಿಕ ಅಧಿಕಾರಿಗಳು ಲೋಕಸಭೆಯಲ್ಲಿ ವಿತ್ತಸಚಿವರ ಮುಂಗಡಪತ್ರ ಭಾಷಣ ಮುಗಿಯುವವರೆಗೂ ಸಚಿವಾಲಯದ ಮುಂಗಡಪತ್ರ ಮುದ್ರಣಾಲಯದಲ್ಲಿಯೇ ಉಳಿದುಕೊಳ್ಳುತ್ತಾರೆ ಮತ್ತು ತಮ್ಮ ಕುಟುಂಬಗಳೊಂದಿಗೂ ಸಂಪರ್ಕವನ್ನು ಹೊಂದಿರುವುದಿಲ್ಲ. ಇದು ಈ ಹಲ್ವದ ವಿಶೇಷತೆ.
ಎನ್‌ಡಿಎ ಸರಕಾರದ ಮೂರನೆ ಪೂರ್ಣಪ್ರಮಾಣದ ಮುಂಗಡಪತ್ರವಾಗಿರುವ ಈ ವರ್ಷದ ಬಜೆಟ್ ಫೆ.1ರಂದು ಸಂಸತ್ತಿನಲ್ಲಿ ಮಂಡನೆಯಾಗಲಿದೆ.


ಮುಂಗಡಪತ್ರ ಸಿದ್ಧತೆ ಪ್ರಕ್ರಿಯೆಯ ಗೋಪ್ಯವನ್ನು ಕಾಯ್ದುಕೊಳ್ಳಲು ಹಲ್ವಾ ಸಮಾರಂಭದ ಬಳಿಕ ಸಿಬ್ಬಂದಿಗೆ ನಾರ್ತ್ ಬ್ಲಾಕ್‌ನಲ್ಲಿರುವ ಬಜೆಟ್ ಮುದ್ರಣಾಲಯ ವಾಸ ಅನಿವಾರ್ಯವಾಗಿದೆ. ಫೋನ್ ಅಥವಾ ಇತರ ಯಾವುದೇ ಸಂಪರ್ಕ ಮಾಧ್ಯಮಗಳ ಮೂಲಕವೂ ಅಧಿಕಾರಿಗಳು ತಮ್ಮ ಪ್ರೀತಿಪಾತ್ರರನ್ನು ಸಂಪರ್ಕಿಸುವಂತಿಲ್ಲ. ವಿತ್ತ ಸಚಿವಾಲಯದ ಅತ್ಯಂತ ಹಿರಿಯ ಅಧಿಕಾರಿಗಳಿಗೆ ಮಾತ್ರ ಮನೆಗೆ ತೆರಳಲು ಅನುಮತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News