ಇಎಸ್‌ಐ ನೀಡದ 130 ಸಂಸ್ಥೆಗಳಿಗೆ ನೋಟಿಸ್: ಶಿವರಾಮಕೃಷ್ಣನ್

Update: 2017-01-19 18:46 GMT

ಮಂಗಳೂರು, ಜ.19: ಕಾರ್ಮಿಕರ ರಾಜ್ಯ ವಿಮಾ ಯೋಜನೆ ಮಂಗಳೂರಿನಲ್ಲಿ ಇಎಸ್‌ಐ ಒದಗಿಸದ 130 ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆನೋಟಿಸ್ ಕಳುಹಿಸಲಾಗಿದೆ ಎಂದು ಇಎಸ್‌ಐ ಮಂಗಳೂರು ಉಪ ವಿಭಾಗದ ಪ್ರಭಾರ ನಿರ್ದೇಶಕ ಶಿವರಾಮಕೃಷ್ಣನ್ ತಿಳಿಸಿದ್ದಾರೆ.

ನಗರದ ಕೆನರಾ ಚೇಂಬರ್ಸ್‌ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ‘ಇಎಸ್‌ಐಯಲ್ಲಿ ಇತ್ತೀಚಿನ ಬೆಳವಣಿಗೆಗಳು’ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.

 ಕಾರ್ಮಿಕರು ಸಾಮಾಜಿಕ ಸುರಕ್ಷತೆ ನೀಡುವ ಇಎಸ್‌ಐ ಸೌಲಭ್ಯದಿಂದ ವಂಚಿತರಾಗದಂತೆ ‘ಸ್ಪ್ರೀ’ (ಸ್ಕೀಮ್ ಫಾರ್ ಪ್ರಮೋಟಿಂಗ್ ರಿಜಿಸ್ಟ್ರೇಷನ್ ಆಫ್ ಎಂಪ್ಲೋಯರ್ಸ್‌ ಆ್ಯಂಡ್ ಎಂಪ್ಲೋಯಿಸ್) ಯೋಜನೆಯಡಿ ವಿಶೇಷ ನೋಂದಣಿಗಾಗಿ 2016ರ ಡಿ.20ರಿಂದ 2017ರ ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಯಾವುದೇ ಸಂಸ್ಥೆಯಲ್ಲಿ 10 ಅಥವಾ ಹೆಚ್ಚು ಕಾರ್ಮಿಕರಿದ್ದಲ್ಲಿ ಹಾಗೂ 21,000ರೂ.ವರೆಗೆ ವೇತನ ಪಡೆದುಕೊಳ್ಳುತ್ತಿದ್ದಲ್ಲಿ ಅಂತಹ ಕಾರ್ಮಿಕರು ಇಎಸ್‌ಐ ಕಾಯ್ದೆ ವ್ಯಾಪ್ತಿಗೆ ಒಳಪಡಬೇಕು. ಎಲ್ಲ ಉದ್ಯೋಗದಾತರನ್ನು ಅವರು ತಿಳಿಸಿದ ದಿನಾಂಕದಿಂದಲೇ ಅಥವಾ ನೋಂದಾಯಿಸಿಕೊಂಡ ದಿನಾಂಕದಿಂದಲೇ ಇಎಸ್‌ಐ ಯೋಜನೆಯ ವ್ಯಾಪ್ತಿಗೆ ಒಳಪಟ್ಟವರು ಎಂದು ಪರಿಗಣಿಸಲಾಗುವುದು. ಈ ಸಂದರ್ಭ ಯಾರಿಗೂ ದಂಡ ಹೇರಲಾಗುವುದಿಲ್ಲ ಹಾಗೂ ಬಾಕಿ ಮಾಡಿದಕ್ಕಾಗಿ ಆರ್ಥಿಕ ಕೊಡುಗೆ ನೀಡಲು ಒತ್ತಾಯವೂ ಹೇರಲಾಗುವುದಿಲ್ಲ. ಇಎಸ್‌ಐ ಸೌಲಭ್ಯವು ಎಲ್ಲ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಆರೋಗ್ಯ ಸುರಕ್ಷತೆಯಾಗಿದೆ ಎಂದು ಶಿವರಾಮಕೃಷ್ಣನ್ ನುಡಿದರು.

ಪ್ರಸ್ತುತ ಇಎಸ್‌ಐ ಸೌಲಭ್ಯ ಪಡೆಯುತ್ತಿರುವ ಯಾವುದೇ ವ್ಯಕ್ತಿ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಸೇರಿದಲ್ಲಿ ತಮ್ಮ ಹಳೆಯ ವಿಮೆ ಸಂಖ್ಯೆಯನ್ನೇ ನೀಡಬೇಕು. ಇದರಿಂದ ಸೌಲಭ್ಯ ಕೊನೆಯವರೆಗೂ ಮುಂದುವರಿಯತ್ತದೆ. ಇಎಸ್‌ಐ ಮೂಲಕ ಪ್ರಾಥಮಿಕ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಒಪ್ಪಂದ ಮಾಡಿಕೊಂಡ ಆಸ್ಪತ್ರೆಗಳಲ್ಲೂ ಹಣ ರಹಿತವಾಗಿ ಚಿಕಿತ್ಸೆ ಪಡೆಯಬಹುದು ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ದಾನ, ಗೌರವ ಕೋಶಾಕಾರಿ ಎಂ. ಗಣೇಶ್ ಭಟ್, ಗೌರವ ಕಾರ್ಯದರ್ಶಿ ಪಿ.ಬಿ.ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News