ಲೈಂಗಿಕ ಕಿರುಕುಳಕ್ಕೊಳಗಾದ ಮಕ್ಕಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಸುವುದು ಅಪರಾಧ: ಕೇರಳ ಹೈಕೋರ್ಟು
ಕೊಚ್ಚಿ,ಜ. 20: ಲೈಂಗಿಕ ಕಿರುಕುಳಕ್ಕೊಳಗಾದ ಮಕ್ಕಳ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು, ಮಕ್ಕಳ ವಿರುದ್ಧ ಲೈಂಗಿಕ ಅತಿಕ್ರಮ ತಡೆ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟು ಅಭಿಪ್ರಾಯ ವ್ಯಕ್ತಪಡಿಸಿದೆ. ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಅಧ್ಯಾಪಕನ ವಿರುದ್ಧ ಕ್ರಮ ಜರಗಿಸದಿದ್ದಾಗ ಸಮಾಜ ಸೇವಾ ಸಂಸ್ಥೆಯೊಂದರ ಕಾನೂನು ಸಲಹೆಗಾರ ಘಟನೆಯ ವಿವರಗಳನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದರು. ಈ ಪ್ರಕರಣವನ್ನು ಪರಿಗಣಿಸಿದ ಕೋರ್ಟು ಮೇಲಿನ ಅಭಿಪ್ರಾಯ ಪ್ರಕಟಿಸಿದೆ ಎಂದು ವರದಿಯೊಂದು ತಿಳಿಸಿದೆ.
ತಿರುವನಂತಪುರಂ ಜಿಲ್ಲೆಯ ಶಾಲೆಯೊಂದರಲ್ಲಿ ಅಧ್ಯಾಪಕ ಮೂವರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಅಪಮಾನಿಸಿದ ಘಟನೆಯ ಬಗ್ಗೆ ಫೇಸುಬುಕ್‌ನಲ್ಲಿ ಸೇವಾಸಂಸ್ಥೆಯ ಕಾನೂನು ಸಲಹೆಗಾರ ವಿವರಿಸಿದ್ದರು. ತಪ್ಪಿತಸ್ಥ
ಅಧ್ಯಾಪಕನ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳದ್ದರಿಂದ ಮಕ್ಕಳ ಶಿಕ್ಷಣ ಸಂರಕ್ಷಣೆಗಾಗಿ ಕೆಲಸಮಾಡುವ ಸಂಘಟನೆ ಕಾನೂನು ಸಲಹೆಗಾರ ಎಸ್. ಆರ್. ಸುಧೀಶ್ ಕುಮಾರ್ ಘಟನೆಗೆ ಸಂಬಂಧಿಸಿದ ವಿವರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಸುಧೀಶ್ ಕುಮಾರ್ ವಿವರಣೆಗಳಿಂದ ಕಿರುಕುಳಕ್ಕೊಳಗಾಗದ ವಿದ್ಯಾರ್ಥಿನಿಯರನ್ನು ಗುರುತು ಹಿಡಿಯಲು ಸಾಧ್ಯವಿದೆ ಎಂದು ಮಕ್ಕಳ ಹಕ್ಕು ಆಯೋಗ ಸುಧೀಶ್ ವಿರುದ್ಧ ತನಿಖೆನಡೆಸಲು ತಿರುವನಂತಪುರಂ ಗ್ರಾಮೀಣ ಎಸ್ಪಿಗೆ ಆದೇಶ ನೀಡಿತ್ತು. ಈ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ಸುಧೀಶ್ ಕುಮಾರ್ ಹೈಕೋರ್ಟಿನ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಹೈ ಕೋರ್ಟು ಕಿರುಕುಳಕ್ಕೊಳಗಾದ ಮಕ್ಕಳ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ಅಪರಾಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.