×
Ad

ಜಲ್ಲಿಕಟ್ಟು ವಿವಾದದಲ್ಲಿ ಮುಸ್ಲಿಂ ದ್ವೇಷ ತುರುಕಲು ಹೋದ ಬಿಜೆಪಿ ನಾಯಕನಿಗೆ ಜನರಿಂದ ಮಂಗಳಾರತಿ

Update: 2017-01-20 16:11 IST

ಚೆನ್ನೈ,ಜ.20: ಜಲ್ಲಿಕಟ್ಟು ವಿವಾದದಲ್ಲಿ ಮುಸ್ಲಿಂ ದ್ವೇಷವನ್ನು ತೂರಿಸಲು ಪ್ರಯತ್ನಿಸಿದ್ದ ಬಿಜೆಪಿ ನಾಯಕನಿಗೆ ಜನರೇ ಸರಿಯಾದ ಮಂಗಳಾರತಿಯನ್ನು ಮಾಡಿದ್ದಾರೆ. ತಮಿಳರ ಒಗ್ಗಟ್ಟಿಗಾಗಿ ನಿಜವಾಗಿಯೂ ಹೆಮ್ಮೆಯಾಗಬೇಕು.

 ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲೆ ಸರ್ವೋಚ್ಚ ನ್ಯಾಯಾಲಯವು ಹೇರಿರುವ ನಿಷೇಧವನ್ನು ವಿರೋಧಿಸಿ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದೆ. ಚೆನ್ನೈನ ಮರೀನಾ ಬೀಚಿನಲ್ಲಿ ಭಾರೀ ಸಂಖ್ಯೆಯ ಜನರಿಂದ ಪ್ರತಿಭಟನೆ ದಿನಚರಿಯಂತಾಗಿದ್ದು, ಗಣ್ಯರೊಂದಿಗೆ ರಾಜಕಾರಣಿಗಳೂ ತಮ್ಮ ಪಕ್ಷಭೇದ ಮರೆತು ಪಾಲ್ಗೊಳ್ಳುತ್ತಿದ್ದಾರೆ. ಶುಕ್ರವಾರ ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರೂ ಮರೀನಾ ಬೀಚ್‌ನಲ್ಲಿ ಒಂದು ದಿನದ ನಿರಶನವನ್ನು ನಡೆಸಿ ಜಲ್ಲಿಕಟ್ಟು ನಿಷೇಧವನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿರುವ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತಿದ್ದಾರೆ.

ದಿನೇ ದಿನೇ ತೀವ್ರಗೊಳ್ಳುತ್ತಿದ್ದರೂ ಶಾಂತಿಯುತವಾಗಿಯೇ ಇರುವ ಪ್ರತಿಭಟನೆಯ ನಡುವೆ ತಮಿಳುನಾಡಿನ ಹಿರಿಯ ಬಿಜೆಪಿ ಪದಾಧಿಕಾರಿಯೋರ್ವರು ಕೋಮು ಭಾವನೆಯನ್ನು ಕೆದಕುವ ಹೇಯ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿಯ ಎಲ್ಲ ಧರ್ಮಗಳ ಜನರೂ ಪಾಲ್ಗೊಂಡಿರುವ ಈ ಚಳವಳಿಗೆ ಕೋಮು ಬಣ್ಣ ನೀಡಲು ಮುಂದಾಗಿದ್ದಾರೆ.

 ತನ್ನ ಟ್ವಿಟರ್ ಬಯೊಡಾಟಾದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಎಂದು ಹೇಳಿಕೊಂಡಿರುವ ಎಚ್.ರಾಜಾ ವಿದ್ಯಾರ್ಥಿಯೋರ್ವನ ಸಾವಿಗೆ ಮುಸ್ಲಿಮರೇ ಕಾರಣ ಎಂದು ಆರೋಪಿಸಿ ಟ್ವೀಟ್ ಮಾಡುವ ಮೂಲಕ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಹತಾಶ ಪ್ರಯತ್ನವನ್ನು ಮಾಡಿದ್ದರು.

 ‘‘ಜಲ್ಲಿಕಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರು ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದಕ್ಕಾಗಿ ವಿದ್ಯಾರ್ಥಿ ವ್ನಿೇಶ ವಾಸುದೇವನ್ ಮೇಲೆ ಬರ್ಬರ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾಗಿದ್ದಾರೆ. ನಾನಿದನ್ನು ಖಂಡಿಸುತ್ತೇನೆ ’’ ಎಂದು ರಾಜಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಅವರು ನಿರೀಕ್ಷಿಸಿದ್ದಂತೆಯೇ ಅವರ ಟ್ವೀಟ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ ಈ ಪ್ರತಿಕ್ರಿಯೆಗಳು ಅವರಿಗೆ ತೀವ್ರ ಆಘಾತವನ್ನುಂಟು ಮಾಡಿವೆ. ಹೆಚ್ಚುಕಡಿಮೆ ಪ್ರತಿಯೊಬ್ಬರೂ ಈವರೆಗೂ ಯಾವುದೇ ಧರ್ಮದ ಬಣ್ಣ ಹಚ್ಚಿಕೊಳ್ಳದ ಜನತೆಯ ಈ ಆಂದೋಲನಕ್ಕೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸಿದ್ದಕ್ಕಾಗಿ ಈ ಕೇಸರಿ ನಾಯಕನಿಗೆ ಚೆನ್ನಾಗಿಯೇ ಉಗಿದಿದ್ದಾರೆ.

 ತಮಿಳುನಾಡಿನ ಚುನಾವಣಾ ರಾಜಕೀಯದಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ 235 ಸದಸ್ಯ ಬಲದ ವಿಧಾನಸಭೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಜನರಲ್ಲಿ ಕೋಮುಭಾವನೆಯನ್ನು ಕೆರಳಿಸುವ ಮೂಲಕ ರಾಜ್ಯದಲ್ಲಿ ತನಗೊಂದು ನೆಲೆಯನ್ನು ಕಂಡುಕೊಳ್ಳಲು ಅದು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಳೆದ ವರ್ಷದ ಜೂನ್‌ನಲ್ಲಿ ಚೆನ್ನೈನ ರೈಲ್ವೆ ನಿಲ್ದಾಣವೊಂದರಲ್ಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿಯ ಕೊಲೆಯನ್ನೂ ಮಸ್ಲಿಮರ ತಲೆಯ ಮೇಲೆ ಹೊರಿಸಲು ಕೆಲವು ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಯತ್ನಿಸಿದ್ದರು. ಕೆಲ ದಿನಗಳ ಬಳಿಕ ಹಂತಕ ರಾಮಕುಮಾರ್‌ನನ್ನು ಪೊಲೀಸರು ಬಂಧಿಸಿದಾಗ ಕೇಸರಿ ಪರಿವಾರದ ಈ ಹುನ್ನಾರ ವಿಫಲಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News