ಪ್ರಧಾನಿ ಮೋದಿಯವರ ನೋಟು ರದ್ದತಿ ಭಾಷಣಕ್ಕೆ ಮುನ್ನ ಮೂರು ಗಂಟೆಗಳಲ್ಲಿ ನಡೆದಿದ್ದೇನು ಗೊತ್ತೇ?
ಹೊಸದಿಲ್ಲಿ,ಜ.20: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ನ.8ರಂದು 500 ಮತ್ತು 1,000 ರೂ.ನೋಟುಗಳನ್ನು ರದ್ದುಗೊಳಿಸುತ್ತಿರುವುದನ್ನು ಪ್ರಕಟಿಸಲು ರಾಷ್ಟ್ರವನ್ನುದ್ದೇಶಿಸಿ ಮಾಡಿದ್ದ ಟಿವಿ ಭಾಷಣಕ್ಕೆ ಮೂರು ಗಂಟೆಗಳ ಮೊದಲು ರಿಸರ್ವ್ ಬ್ಯಾಂಕ್ ನಿಷೇಧ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿತ್ತು.
ಇಂದಿಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಕುರಿತ ಸಂಸದೀಯ ಸಮಿತಿಯ ಎದುರು ಹಾಜರಾದ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, ನ.8ರಂದು ತನ್ನ ಅಧ್ಯಕ್ಷತೆಯಲ್ಲಿ ನಡೆದಿದ್ದ ಆರ್‌ಬಿಐ ಮಂಡಳಿ ಸಭೆಯು ಒಂದು ದಿನ ಮೊದಲು ತನಗೆ ಸಲ್ಲಿಸಲಾಗಿದ್ದ ನೋಟು ನಿಷೇಧ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿತ್ತು ಎಂದು ತಿಳಿಸಿದರು.
ಪಟೇಲ್ ಬುಧವಾರ ಹಣಕಾಸು ಕುರಿತ ಸಂಸದೀಯ ಸಮಿತಿಯ ಎದುರು ಹಾಜರಾಗಿದ್ದರು. ನಿನ್ನೆ ಮತ್ತು ಇಂದು ಅವರು ನೀಡಿದ ಮಾಹಿತಿಗಳು ಸರಕಾರ ಮತ್ತು ಆರ್‌ಬಿಐ ನೋಟು ನಿಷೇಧ ಕುರಿತು ಕಳೆದ ವರ್ಷದ ಮೇ ತಿಂಗಳಲ್ಲಿಯೇ ಮಾತುಕತೆಗಳನ್ನು ಆರಂಭಿಸಿದ್ದವು ಎನ್ನುವುದನ್ನು ಸೂಚಿಸುತ್ತಿವೆ. ನ.7ರಂದು ಈ ಯೋಜನೆಗೆ ಆರಂಭ ದೊರಕಿದ್ದು, ಎಲ್ಲವೂ ತ್ವರಿತವಾಗಿ ನಡೆದು 24 ಗಂಟೆಗಳಲ್ಲಿ ನೋಟು ನಿಷೇಧ ಪ್ರಕಟಣೆ ಹೊರಬಿದ್ದಿತ್ತು.
ನ.8ರಂದು ದಿಲ್ಲಿಯಲ್ಲಿ ಸಭೆ ಸೇರಿದ್ದ ಆರ್‌ಬಿಐ ಮಂಡಳಿಯು ನೋಟು ನಿಷೇಧದ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದರೆ ಅತ್ತ ಪ್ರಧಾನಿ ತನ್ನ ಸಂಪುಟ ಸದಸ್ಯರು ಸಂಜೆ ಏಳು ಗಂಟೆಯಿಂದ ತನ್ನ ಕಚೇರಿಯಲ್ಲಿ ಕಾಯುವಂತೆ ಮಾಡಿದ್ದರು. ಸಚಿವರಿಗೆ ಸೆಲ್ ಪೋನ್‌ಗಳನ್ನು ಬಳಸಲು ಅವಕಾಶ ನೀಡಲಾಗಿರಲಿಲ್ಲ. ಸಂಪುಟ ಸಭೆಗಳಲ್ಲಿ ಸಚಿವರು ಮೊಬೈಲ್ ಬಳಸಕೂಡದು ಎಂಬ ನಿರ್ಧಾರವನ್ನು ಕಳೆದ ಜುಲೈನಲ್ಲಿ ಮೊದಲ ಬಾರಿಗೆ ತೆಗೆದುಕೊಳ್ಳಲಾಗಿತ್ತು. ಮುಂದೇನಾಗಲಿದೆ ಎನ್ನುವುದರ ಅರಿವಿದ್ದ ಪ್ರಧಾನಿ ಕಚೇರಿಯ ಸಿಬ್ಬಂದಿಗಳು ಮತ್ತು ವಿತ್ತ ಸಚಿವಾಲಯದ ತಂಡ ಆರ್‌ಬಿಐ ನಿರ್ಧಾರಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು.
ಆಗಲೇ,ಆರ್‌ಬಿಐ ಮಂಡಳಿಯ 10 ಸದಸ್ಯರ ಪೈಕಿ ಎಂಟು ಸದಸ್ಯರು ಸರಕಾರದ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ ಎಂಬ ಸಂದೇಶ ಬಂದಿತ್ತು. ಇಷ್ಟಾದ ಬಳಿಕ ಮೋದಿಯವರು ತನ್ನ ನಿವಾಸದಿಂದ ಪ್ರಧಾನಿ ಕಚೇರಿಗೆ ತೆರಳಿ ತನ್ನ ಬೃಹತ್ ಆರ್ಥಿಕ ಸುಧಾರಣೆ ಯೋಜನೆಯನ್ನು ಸಂಪುಟ ಸದಸ್ಯರಿಗೆ ಬಹಿರಂಗ ಗೊಳಿಸಿದ್ದರು. ಅದನ್ನು ವಿಧ್ಯುಕ್ತವಾಗಿ ಪರಿಶೀಲಿಸಿದ ಸಂಪುಟ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಎಂಟು ಗಂಟೆಗೆ ಪ್ರಧಾನಿಯವರು ರಾಷ್ಟ್ರವನ್ನುದ್ದೇಶಿಸಿ ತನ್ನ ಭಾಷಣವನ್ನು ಆರಂಭಿಸಿದ್ದರು.
ನೋಟು ರದ್ದತಿ ಕ್ರಮಕ್ಕೆ ತಾನು ಸಿದ್ಧವಾಗಿದ್ದೆ ಎಂದು ಆರ್‌ಬಿಐ ಹೇಳಿದೆ. ಅದರ ಆಡಳಿತ ಮಂಡಳಿಯ ಹತ್ತು ಸದಸ್ಯರ ಪೈಕಿ ಒಬ್ಬರು ವಿದೇಶದಲ್ಲಿದ್ದರೆ, ಇನ್ನೋರ್ವರು ಮುಂಬೈನ ಕೇಂದ್ರ ಕಚೇರಿಯಲ್ಲಿದ್ದು, ಅವರಿಗೆ ಸರಕಾರದ ನಿರ್ಧಾವನ್ನು ತಕ್ಷಣವೇ ಜಾರಿಗೊಳಿಸಲು ಅಗತ್ಯ ಸಮನ್ವಯ ಕಾರ್ಯಕ್ಕೆ ನಿಯೋಜಿಸಲಾಗಿತ್ತು.
ಯೋಜನೆಗೆ ಅಂತಿಮ ಒತ್ತು ತರಾತುರಿಯಲ್ಲಿ ನೀಡಲಾಗಿತ್ತಾದರೂ ನೋಟು ನಿಷೇಧ ಯೋಜನೆ ತರಾತುರಿಯದ್ದಾಗಿರಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಮಾತುಕತೆಗಳು ಮೇ ತಿಂಗಳಿನಲ್ಲಿಯೇ ಆರಂಭಗೊಂಡಿದ್ದು, ಇದಕ್ಕಾಗಿ ಆರ್‌ಬಿಐ ಗವರ್ನರ್ ಮತ್ತು ಉಪ ಗವರ್ನರ್ ನಿಯಮಿತವಾಗಿ ದಿಲ್ಲಿಗೆ ಭೇಟಿ ನೀಡುತ್ತಿದ್ದರು. ಸುಮಾರಾಗಿ ಪ್ರತಿ ಶುಕ್ರವಾರ ಸಂಜೆ ಆರು ಗಂಟೆಯ ಬಳಿಕ ಮೋದಿಯವರು ರಚಿಸಿದ್ದ ಪ್ರಧಾನಿ ಕಚೇರಿ ಮತ್ತು ವಿತ್ತ ಸಚಿವಾಲಯದ ಅಧಿಕಾರಿಗಳ ತಂಡದ ಜೊತೆಗೆ ನಡೆಯುತ್ತಿದ್ದ ಸಭೆಗಳಲ್ಲಿ ನೋಟು ರದ್ದತಿಯ ಅನುಷ್ಠಾನ ಕ್ರಮ, ನಂತರದ ಪರಿಸ್ಥಿತಿಗೆ ಸನ್ನದ್ಧತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು ಎಂದು ಅವು ಹೇಳಿವೆ. ಗೌಪ್ಯವನ್ನು ಕಾಯ್ದುಕೊಳ್ಳಲು ಈ ಸಭೆಗಳ ನಡಾವಳಿಗಳನ್ನೂ ದಾಖಲಿಸುತ್ತಿರಲಿಲ್ಲ.
ನೋಟು ರದ್ದತಿಯು ಕಪ್ಪುಹಣ ಮತ್ತು ನಕಲಿ ನೋಟುಗಳ ಪಿಡುಗನ್ನು ತಡೆಯುತ್ತದೆ ಎಂಬ ಕೇಂದ್ರದ ಅಭಿಪ್ರಾಯವನ್ನು ಆರ್‌ಬಿಐ ಒಪ್ಪಿಕೊಂಡಿತ್ತು ಎಂದು ಪಟೇಲ್ ಸಂಸದೀಯ ಸಮಿತಿಗಳಿಗೆ ತಿಳಿಸಿದ್ದಾರೆ.
ಮೇ ಮತ್ತು ಆಗಸ್ಟ್ ನಡುವೆ ಆಗ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ ರಾಜನ್ ಅವರು ಈ ಸಭೆಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಮೂಲಗಳು ತಿಳಿಸಿದವು. ಆಗಸ್ಟ್‌ನಲ್ಲಿ ರಾಜನ್ ಅಧಿಕಾರಾವಧಿ ಮುಗಿದ ಬಳಿಕ ಪಟೇಲ್ ನೂತನ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ನಾಯಕತ್ವದಲ್ಲಿ ಬದಲಾವಣೆಯಿಂದಾಗಿ 2,000 ರೂ.ನೋಟುಗಳ ಮುದ್ರಣದಲ್ಲಿ ಕೊಂಚ ವಿಳಂಬವಾಗಿತ್ತು. ಹೊಸನೋಟುಗಳ ಮುದ್ರಣಕ್ಕಾಗಿ ಜೂನ್‌ನಲ್ಲಿಯೇ ನಿರ್ಧರಿಸಲಾಗಿತ್ತು. ನೂತನ ನೋಟುಗಳ ಮೇಲೆ ಆರ್‌ಬಿಐ ಗವರ್ನರ್ ಸಹಿ ಅಗತ್ಯವಾಗಿದ್ದರಿಂದ ಪಟೇಲ್ ಅಧಿಕಾರ ಸ್ವೀಕರಿಸುವವರೆಗೆ ನೋಟು ಮುದ್ರಣವನ್ನು ಮುಂದೂಡಲಾಗಿತ್ತು ಎಂದು ಮೂಲಗಳು ಹೇಳಿವೆ.