×
Ad

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರೋಧಿಗಳಿಗೆ ಬ್ರಹ್ಮಾಸ್ತ್ರ ನೀಡಿದ ಆರೆಸ್ಸೆಸ್ ಮುಖಂಡ ವೈದ್ಯ

Update: 2017-01-20 21:25 IST

ಜೈಪುರ್, ಜ. 20 : ಮಹತ್ವದ  ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯ ಕಾವು ಏರುತ್ತಿರುವುಂತೆಯೇ ಆರೆಸ್ಸೆಸ್ ಹಿರಿಯ ಮುಖಂಡ ಮನಮೋಹನ್ ವೈದ್ಯ ಅವರು ಮೀಸಲಾತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೈಪುರದಲ್ಲಿ ನಡೆಯುತ್ತಿರುವ ಲಿಟರೇಚರ್ ಫೆಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಮನಮೋಹನ್ ವೈದ್ಯ ಅವರು " ಜಾತಿ ಆಧರಿತ ಮೀಸಲಾತಿಯನ್ನು ನಿಲ್ಲಿಸಬೇಕು" ಎಂದು ಹೇಳಿಬಿಟ್ಟಿದ್ದಾರೆ.

ಕಳೆದ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೀಸಲಾತಿಯ ಕುರಿತು ಪುನರ್ ವಿಮರ್ಶೆ ನಡೆಯಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆ ಬಳಿಕ ಅದೆಷ್ಟು ವಿವರಣೆ ನೀಡಿದರೂ ಆರೆಸ್ಸೆಸ್ ಹಾಗು ಬಿಜೆಪಿ ಮೀಸಲಾತಿಗೆ ವಿರುದ್ಧ ಇವೆ ಎಂಬ ಭಾವನೆ ವ್ಯಾಪಕವಾಗಿ ಹರಡಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು.

ಈಗ ವೈದ್ಯ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮೀಸಲಾತಿಯನ್ನು ನಿಲ್ಲಿಸಬೇಕು ಎಂದೇ ಹೇಳಿದ್ದಾರೆ. " ಅಂಬೇಡ್ಕರ್ ಕೂಡ ಮೀಸಲಾತಿ ಶಾಶ್ವತವಾಗಿ ಮುಂದುವರೆಯುವುದು ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಅದರ ಬದಲು ಉದ್ಯೋಗಾವಕಾಶ ಹೆಚ್ಚಾಗಬೇಕು " ಎಂದು ವೈದ್ಯ ಹೇಳಿದ್ದಾರೆ. ಇದು ಬಿಜೆಪಿ ಪಾಲಿಗೆ ಚುನಾವಣೆಯ ಸಂದರ್ಭದಲ್ಲಿ ದುಬಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತದೆ. 

ಇದನ್ನು ಸರಿಪಡಿಸಲು ತಕ್ಷಣ ಪ್ರಯತ್ನಿಸಿದ ಇನ್ನೋರ್ವ ಹಿರಿಯ ಆರೆಸ್ಸೆ ಮುಖಂಡ  ದತ್ತಾತ್ರೇಯ ಹೊಸಬಾಳೆ " ಈಗಲೂ ತಾರತಮ್ಯ ಇದೆ. ಕೆಲವು ವರ್ಗಗಳ ವಿರುದ್ಧ ಈಗಲೂ ಇದು ಮುಂದುವರೆಯುತ್ತಿದೆ . ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಜಾತಿ ಆಧರಿತ ಮೀಸಲಾತಿ ಮುಂದುವರಿಯಬೇಕು " ಎಂಬುದು ವೈದ್ಯ ಅವರ ಅಭಿಪ್ರಾಯವಾಗಿತ್ತು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News