ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರಗಳಿಗಾಗಿ ಎಸ್‌ಪಿ-ಕಾಂಗ್ರೆಸ್ ಕಚ್ಚಾಟ
ಲಕ್ನೋ,ಜ.21: ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಿಗಾಗಿ ಉಭಯ ಪಕ್ಷಗಳ ನಡುವಿನ ಕಚ್ಚಾಟದಿಂದಾಗಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಭರವಸೆಯನ್ನು ಮೂಡಿಸಿದ್ದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಮಾತುಕತೆ ಬಿಕ್ಕಟ್ಟಿನಲ್ಲಿ ಸಿಲುಕಿದೆ.
ಇನ್ನೂ ಎಲ್ಲವೂ ಮುಗಿದಿಲ್ಲ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೆಚ್ಚುತ್ತಿರುವ ಉದ್ವಿಗ್ನತೆಯೆ ನಡುವೆಯೇ ಹೇಳಿದವು.
ಪ್ರತಿಯೊಂದು ಪಕ್ಷವು ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಮತ್ತು ಯಾವ ಕ್ಷೇತ್ರಗಳು ಯಾವ ಪಕ್ಷಕ್ಕೆ ದೊರೆಯಲಿವೆ ಎನ್ನುವ ಎರಡು ಮುಖ್ಯ ವಿಷಯಗಳ ಸುತ್ತ ಬಿಕ್ಕಟ್ಟು ಗಿರಕಿ ಹೊಡೆಯುತ್ತಿದೆ.
ಕಳೆದ ಸೋಮವಾರದವರೆಗೂ ಉಭಯ ಪಕ್ಷಗಳು ಮೈತ್ರಿ ಶತಃಸಿದ್ಧ ಎಂಬ ಸಂಕೇತಗಳನ್ನು ನೀಡಿದ್ದವು. ಆದರೆ ಉಭಯ ಪಕ್ಷಗಳು ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದಾಗ ಬಿಕ್ಕಟ್ಟು ಉದ್ಭವಿಸಿದೆ.
ಕಾಂಗ್ರೆಸ್ ಶಾಸಕರ ಕೆಲವು ಕ್ಷೇತ್ರಗಳು ಸೇರಿದಂತೆ 240 ವಿಧಾನಸಭಾ ಕ್ಷೇತ್ರಗಳಿಗೆ ಅಖಿಲೇಶ್ ಈಗಾಗಲೇ ಪಕ್ಷದ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಮೊದಲ ಹಂತದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆಗೆ ಜ.24 ಕೊನೆಯ ದಿನಾಂಕವಾಗಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಅಭ್ಯರ್ಥಿಗಳ ಹೆಸರುಗಳನ್ನು ಅವರು ಪ್ರಕಟಿಸಬಹುದು ಎಂದು ಹಿರಿಯ ಎಸ್‌ಪಿ ನಾಯಕರು ಇಂದಿಲ್ಲಿ ಸುಳಿವು ನೀಡಿದರು.
ತೊಂದರೆಯನ್ನು ಗ್ರಹಿಸಿರುವ ಕಾಂಗ್ರೆಸ್ ನಾಯಕರು ಲಕ್ನೋಕ್ಕೆ ಧಾವಿಸಿ ಬಂದಿದ್ದಾರೆ. ರಾಜ್ಯದಲ್ಲಿ ನಾಲ್ಕನೇ ಸ್ಥಾನಕ್ಕಿಳಿದಿರುವ ಕಾಂಗ್ರೆಸ್ ತನ್ನ ನೆಲೆಯನ್ನು ಮತ್ತೆ ಕಂಡುಕೊಳ್ಳಲು ಮೈತ್ರಿಯ ಮೇಲೆ ಕಣ್ಣು ನೆಟ್ಟಿದೆ.
ಕಾಂಗ್ರೆಸ್ ಸುಮಾರು 130 ಕ್ಷೇತ್ರಗಳಿಗಾಗಿ ಬೇಡಿಕೆ ಮಂಡಿಸಿದೆ, ಆದರೆ ಇಷ್ಟೊಂದು ಕ್ಷೇತ್ರಗಳನ್ನು ಕೇಳುವ ಪ್ರಾಬಲ್ಯವನ್ನು ಅದು ರಾಜ್ಯದಲ್ಲಿ ಹೊಂದಿಲ್ಲ ಎಂದು ಎಸ್‌ಪಿ ನಾಯಕರು ಪ್ರತಿಪಾದಿಸಿದ್ದಾರೆ.
ಆದರೆ ನಿಜವಾದ ಕಚ್ಚಾಟ ಇರುವುದು ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಸ್ಥಾನಗಳಿಗಾಗಿ ಎಂದು ಪಕ್ಷದೊಳಗಿನ ಮೂಲಗಳು ಹೇಳಿವೆ.