ಬಾನ್ ಕಿ ಮೂನ್ ಸೋದರನ ಬಂಧನಕ್ಕೆ ದಕ್ಷಿಣ ಕೊರಿಯಕ್ಕೆ ಅಮೆರಿಕ ಸೂಚನೆ

Update: 2017-01-21 14:03 GMT

ನ್ಯೂಯಾರ್ಕ್, ಜ. 21: ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ವಿಶ್ವಸಂಸ್ಥೆಯ ಮಾಜಿ ಮಹಾಕಾರ್ಯದರ್ಶಿ ಬಾನ್ ಕಿ ಮೂನ್‌ರ ಸಹೋದರನೊಬ್ಬನನ್ನು ಬಂಧಿಸುವಂತೆ ಅಮೆರಿಕ ಸರಕಾರ ದಕ್ಷಿಣ ಕೊರಿಯವನ್ನು ಕೋರಿದೆ ಎಂದು ಅಮೆರಿಕದ ಪ್ರಾಸಿಕ್ಯೂಟರ್ ಒಬ್ಬರು ಶುಕ್ರವಾರ ಹೇಳಿದ್ದಾರೆ.

ವಿಯೆಟ್ನಾಂನ ಕಟ್ಟಡ ಸಂಕೀರ್ಣವೊಂದರ ಮಾರಾಟಕ್ಕೆ ಸಂಬಂಧಿಸಿ ಲಂಚ ನೀಡಿರುವ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.ದಕ್ಷಿಣ ಕೊರಿಯದ ನಿರ್ಮಾಣ ಸಂಸ್ಥೆ ಕಿಯಾಂಗ್‌ನಾಮ್ ಎಂಟರ್‌ಪ್ರೈಸಸ್ ಕೊ ಲಿಮಿಟೆಡ್‌ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಬಾನ್ ಕಿ ಸಂಗ್ ಅವರ ಬಂಧನಕ್ಕೆ ಮನವಿ ಮಾಡಲಾಗಿದೆ ಎಂದು ಮ್ಯಾನ್‌ಹಟನ್‌ನ ಫೆಡರಲ್ ನ್ಯಾಯಾಲಯವೊಂದರಲ್ಲಿ ನಡೆದ ವಿಚಾರಣೆಯ ವೇಳೆ ಸಹಾಯಕ ಅಟಾರ್ನಿ ಡೇನಿಯಲ್ ನೋಬಲ್ ತಿಳಿಸಿದರು.

ಅಮೆರಿಕವು ಬಾನ್ ಕಿ ಸಂಗ್‌ರ ಗಡಿಪಾರನ್ನು ಕೋರಲಿದೆ ಎಂದು ಹೇಳಿದ ನೋಬಲ್, ‘‘ಆದರೆ, ಈಗಿನ ಮಟ್ಟಿಗೆ ಅವರನ್ನು ಬಂಧಿಸಲಾಗಿಲ್ಲ’’ ಎಂದರು.
ದಕ್ಷಿಣ ಕೊರಿಯದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿರುವ, ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿರುವ ಬಾನ್ ಕಿ ಮೂನ್‌ರ ಸ್ಪರ್ಧೆಯ ಮೇಲೆ ಈ ಸುದ್ದಿ ಪರಿಣಾಮ ಬೀರಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News