×
Ad

ಮೀಸಲಾತಿ ರದ್ದತಿಗೆ ಉ.ಪ್ರದೇಶ ಚುನಾವಣೆಯ ಗೆಲುವು ವೇದಿಕೆ: ಪ್ರಕಾಶ್ ಅಂಬೇಡ್ಕರ್

Update: 2017-01-21 21:32 IST

ಮುಂಬೈ, ಜ.21: ಮೀಸಲಾತಿ ಕುರಿತ ಆರ್‌ಎಸ್‌ಎಸ್ ಮುಖಂಡ ಮೋಹನ್ ವೈದ್ಯ ಅವರ ಹೇಳಿಕೆಯನ್ನು ಗಮನಿಸಿದರೆ, ಉತ್ತರಪ್ರದೇಶ ವಿಧಾನಸಭೆ ಚುನಾವಣೆಯು ನೀರಿಗೆ ಇಳಿಯುವ ಮುನ್ನ ನೀರಿನಾಳ ಪರೀಕ್ಷಿಸುವ ವೇದಿಕೆ ಎಂದು ಭಾಸವಾಗುತ್ತದೆ ಎಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ರ, ಭರಿಪ ಬಹುಜನ ಮಹಾಸಂಘ ಮುಖಂಡ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಸಂವಿಧಾನ ಶಿಲ್ಪಿಯಾಗಿರುವ ಡಾ. ಅಂಬೇಡ್ಕರ್ ಕೂಡಾ ಮೀಸಲಾತಿ ನಿಯಮ ನಿರಂತರ ಮುಂದುವರಿಯುವುದನ್ನು ಬಯಸಿರಲಿಲ್ಲ . ಆದ್ದರಿಂದ ಮೀಸಲಾತಿ ನಿಯಮವನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಿರಿಯ ಆರೆಸ್ಸೆಸ್ ಮುಖಂಡ ಮೋಹನ್ ವೈದ್ಯ ಹೇಳಿಕೆ ನೀಡಿದ್ದರು.

  ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದಿಂದ ಅತ್ಯಧಿಕ ಸಂಸದರು ದಿಲ್ಲಿಗೆ ಆರಿಸಿಬರುತ್ತಾರೆ. ಆದ್ದರಿಂದ ಜನರ ಅಭಿಪ್ರಾಯ ತಿಳಿದುಕೊಳ್ಳುವ ಉದ್ದೇಶದಿಂದ ಆರೆಸ್ಸೆಸ್ ಮುಖಂಡ ವೈದ್ಯ ಗಾಳಿಪಟ ಹಾರಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಇನ್ನೂ ಎರಡು ವರ್ಷಗಳ ಅವಕಾಶವಿದೆ ಎಂಬುದನ್ನು ಮರೆಯಬಾರದು ಎಂದು ಪಿಟಿಐ ಜತೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟರು.

ಬಿಹಾರದಲ್ಲಿ ನಡೆದ ಚುನಾವಣೆ ಸಂದರ್ಭ ಆರೆಸ್ಸೆಸ್ ಮುಖಂಡ ಭಾಗವತ್ ಇದೇ ರೀತಿಯ ಹೇಳಿಕೆ ನೀಡಿದ ಕಾರಣ ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು ಎಂಬ ವಿಶ್ಲೇಷಣೆ ಸರಿಯಲ್ಲ. ಆ ಹೇಳಿಕೆಯ ಪರಿಣಾಮ ಬಿಜೆಪಿಗೆ ನಷ್ಟವಾದದ್ದು ಕೇವಲ ಐದು ಶೇಕಡಾ ಮತ ಮಾತ್ರ. ಆರ್‌ಜೆಡಿ ಮತ್ತು ಜೆಡಿಯು ಮತಗಳು ಧೃವೀಕರಣಗೊಂಡ ಕಾರಣ ಅಲ್ಲಿ ಬಿಜೆಪಿಗೆ ಸೋಲಾಯಿತು ಎಂದ ಅವರು, ಈ ಹೇಳಿಕೆಯನ್ನು ಖಂಡಿಸಿ ಸುಮ್ಮನಿರುತ್ತೇನೆ ಎಂದು ಭಾವಿಸಬೇಡಿ. ಇನ್ನು ಕೂಡಾ ಬಿಜೆಪಿಯನ್ನು ಬೆಂಬಲಿಸುತ್ತೀರಾ ಎಂದು ಮೀಸಲಾತಿಯ ಲಾಭ ಪಡೆಯುತ್ತಿರುವವರನ್ನು ಕೇಳುತ್ತೇನೆ. ಈ ಬಾರಿಯ ಚುನಾವಣೆ ಬಿಜೆಪಿಗೆ ಸ್ಪಷ್ಟವಾದ ಸಂದೇಶ ತಲುಪಿಸಬೇಕು ಎಂದರು.

ಉತ್ತರಪ್ರದೇಶದಲ್ಲಿ ಯಾವುದೇ ಪಕ್ಷ ಏಕಾಂಗಿಯಾಗಿ ಸರಕಾರ ನಡೆಸುವಷ್ಟು ಬಹುಮತ ಪಡೆಯದು ಎಂದ ಅವರು, ಬಿಎಸ್‌ಪಿ ಈಗ ಮೇಲುಗೈ ಪಡೆದಿದೆ. ಆದರೆ ಬಿಜೆಪಿ ಮತ್ತಿ ಎಸ್‌ಪಿ ಕೂಡಾ ಬಲಿಷ್ಠವಾಗಿದೆ. ಎಸ್‌ಪಿ ಮತ್ತು ಕಾಂಗ್ರೆಸ್ ಜತೆಯಾಗಿ ಸಾಗಿದರೆ ಹೆಚ್ಚು ಸ್ಥಾನ ಪಡೆಯಬಹುದು ಎಂದರು. ಬಿಜೆಪಿಗೆ ತಕ್ಕಮಟ್ಟಿಗೆ ಅನುಕೂಲಕರ ವಾತಾವರಣ ಇತ್ತು. ಆದರೆ ಈಗ ಮೀಸಲಾತಿ ಹೇಳಿಕೆಯ ಬಳಿಕ ಆ ಪಕ್ಷದ ಸಾಧನೆ ಎಷ್ಟು ಎಂಬುದು ಕುತೂಹಲಕಾರಿಯಾಗಿದೆ ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News