ಎರಡನೆ ಟೆಸ್ಟ್: ನ್ಯೂಝಿಲೆಂಡ್ 260/7

Update: 2017-01-21 17:24 GMT

ಕ್ರೈಸ್ಟ್‌ಚರ್ಚ್, ಜ.21: ಆರಂಭಿಕ ಆಟಗಾರ ಲಥಾಮ್(68), ರಾಸ್ ಟೇಲರ್(77), ನಿಕೊಲ್ಸ್(ಅಜೇಯ 56) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿದೆ.

ಎರಡನೆ ದಿನವಾದ ಶನಿವಾರ ಮಳೆಯಿಂದಾಗಿ ಪಂದ್ಯ ಬೇಗನೆ ಕೊನೆಗೊಳ್ಳುವ ಮೊದಲು ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್(3-32) ಕಿವೀಸ್‌ನ ಮಧ್ಯಮ ಕ್ರಮಾಂಕದಲ್ಲಿ ಸತತ ಮೂರು ವಿಕೆಟ್‌ಗಳನ್ನು ಕಬಳಿಸಿ ನಡುಕ ಹುಟ್ಟಿಸಿದರು. ದಿನದಾಟದಂತ್ಯಕ್ಕೆ 7 ವಿಕೆಟ್‌ಗೆ 260 ರನ್ ಗಳಿಸಿರುವ ಕಿವೀಸ್ ತಂಡ ಬಾಂಗ್ಲಾ ಇನಿಂಗ್ಸ್‌ಗಿಂತ 29 ರನ್ ಹಿನ್ನಡೆಯಲ್ಲಿದೆ.

ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ ಸೌಮ್ಯ ಸರ್ಕಾರ್(86) ನೆರವಿನಿಂದ 289 ರನ್ ಗಳಿಸಿತ್ತು.

ಶನಿವಾರ 2ನೆ ದಿನದಾಟ ಅಂತ್ಯಗೊಳ್ಳಲು 50 ನಿಮಿಷಗಳಿರುವಾಗಲೇ ಆಟ ಕೊನೆಗೊಂಡಿದ್ದು, ನಿಕೊಲ್ಸ್(ಅಜೇಯ 56) ಹಾಗೂ ಟಿಮ್ ಸೌಥಿ(ಅಜೇಯ 4) ಕ್ರೀಸ್ ಕಾಯ್ದುಕೊಂಡಿದ್ದರು.

ಮೊದಲ ವಿಕೆಟ್‌ಗೆ ಜೀತ್ ರಾವಲ್ ಹಾಗೂ ಟಾಮ್ ಲಥಾಮ್ 45 ರನ್ ಸೇರಿಸುವ ಮೂಲಕ 2ನೆ ದಿನದಾಟ ಆರಂಭಿಸಿದರು. ರಾವಲ್(16) ಹಾಗೂ ನಾಯಕ ವಿಲಿಯಮ್ಸನ್(2)ಕಮ್ರುಲ್ ರಬ್ಬಿಗೆ ವಿಕೆಟ್ ಕಬಳಿಸಿದರು.

 ರಾಸ್ ಟೇಲರ್ ಹಾಗೂ ಲಥಾಮ್ 3ನೆ ವಿಕೆಟ್‌ಗೆ 106 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಎಡಗೈ ಆರಂಭಿಕ ಆಟಗಾರ ಲಥಾಮ್ 12ನೆ ಅರ್ಧಶತಕ ಬಾರಿಸಿದರು. ಟೇಲರ್ ಟೆಸ್ಟ್‌ನಲ್ಲಿ 27ನೆ ಅರ್ಧಶತಕ ಬಾರಿಸಿದರು.

ಮೆಹದಿ ಹಸನ್ ಬೌಲಿಂಗ್‌ನಲ್ಲಿ 3 ರನ್ ಗಳಿಸಿದ ಟೇಲರ್ 6000 ಟೆಸ್ಟ್ ರನ್ ಗಳಿಸಿದ ನ್ಯೂಝಿಲೆಂಡ್‌ನ 3ನೆ ದಾಂಡಿಗ ಎನಿಸಿಕೊಂಡರು. ಸ್ಟೀಫನ್ ಫ್ಲೆಮಿಂಗ್(7172) ಹಾಗೂ ಬ್ರೆಂಡನ್ ಮೆಕಲಮ್(6453) ಟೇಲರ್‌ಗಿಂತ ಹೆಚ್ಚು ರನ್ ಗಳಿಸಿ ಕಿವೀಸ್‌ನ ಮಾಜಿ ದಾಂಡಿಗರು.

ನಿಕೊಲ್ಸ್(56) ಹಾಗೂ ಮಿಚೆಲ್ ಸ್ಯಾಂಟ್ನರ್(29) 5ನೆ ವಿಕೆಟ್‌ಗೆ 75 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಶಾಕಿಬ್ ಬೇರ್ಪಡಿಸಿದರು. ದಿನದಾಟದಂತ್ಯಕ್ಕೆ ಆತಿಥೇಯರು 4 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News