ಇರಾನಿ ಕಪ್: ಗುಜರಾತ್ ಮೇಲುಗೈ, ಪೂಜಾರ ಏಕಾಂಗಿ ಹೋರಾಟ

Update: 2017-01-21 17:32 GMT

ಮುಂಬೈ, ಜ.21: ಇರಾನಿ ಕಪ್‌ನ ಎರಡನೆ ದಿನದಾಟವಾದ ಶನಿವಾರ 10 ವಿಕೆಟ್‌ಗಳು ಪತನಗೊಂಡಿದ್ದು, ಶೇಷ ಭಾರತದ ವಿರುದ್ದ ರಣಜಿ ಚಾಂಪಿಯನ್ ಗುಜರಾತ್ ತಂಡದ ಬ್ಯಾಟ್ಸ್‌ಮನ್ ಚಿರಾಗ್ ಗಾಂಧಿ 169 ರನ್ ಬಾರಿಸಿ ದಿನದ ಹೀರೋವಾಗಿ ಹೊರಹೊಮ್ಮಿದರು.

ಗುಜರಾತ್‌ನ ಮೊದಲ ಇನಿಂಗ್ಸ್ 358 ರನ್‌ಗೆ ಉತ್ತರಿಸಹೊರಟಿರುವ ಶೇಷ ಭಾರತ ತಂಡ ನಾಯಕ ಚೇತೇಶ್ವರ ಪೂಜಾರ(86 ರನ್, 156 ಎಸೆತ,11 ಬೌಂಡರಿ) ಏಕಾಂಗಿ ಹೋರಾಟದ ಹೊರತಾಗಿಯೂ ದಿನದಾಟದಂತ್ಯಕ್ಕೆ 72 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 206 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಗುಜರಾತ್ ಇನಿಂಗ್ಸ್‌ಗಿಂತ 152 ರನ್ ಹಿನ್ನಡೆಯಲ್ಲಿದೆ.

 ಶಿಸ್ತುಬದ್ಧ ಹಾಗೂ ನಿಯಂತ್ರಿತ ಬೌಲಿಂಗ್ ದಾಳಿ ನಡೆಸಿದ ಗುಜರಾತ್ ಬೌಲರ್‌ಗಳು 2ನೆ ದಿನದ ಗೌರವಕ್ಕೆ ಪಾತ್ರರಾದರು. ತ್ರಿವಳಿ ಬೌಲರ್‌ಗಳಾದ ಚಿಂತನ್ ಗಜ(3-46), ಮೋಹಿತ್ ಥಾಡಾನಿ(2-48) ಹಾಗೂ ಹಾರ್ದಿಕ್ ಪಟೇಲ್(3-73) ಹಳೆ ಹಾಗೂ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್ ನಡೆಸಿ 8 ವಿಕೆಟ್‌ಗಳನ್ನು ಹಂಚಿಕೊಂಡರು.

ಗುಜರಾತ್ 358 ರನ್‌ಗೆ ಆಲೌಟಾದ ಬಳಿಕ ಗಜ ಹಾಗೂ ಈಶ್ವರ್ ಚೌಧರಿ ಬಿಗಿ ಬೌಲಿಂಗ್ ನಡೆಸಿ ಶೇಷ ಭಾರತಕ್ಕೆ ಕಡಿವಾಣ ಹಾಕಿದರು. ಗಜ ಅವರು ಆರಂಭಿಕ ದಾಂಡಿಗ ಅಭಿನವ್ ಮುಕುಂದ್(8) ವಿಕೆಟ್ ಉರುಳಿಸಿದರು. ಗೊಹಿಲ್ ಸ್ಲಿಪ್ ಕಾರ್ಡನ್‌ನಲ್ಲಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಮಿಂಚಿದರು.

89 ರನ್‌ಗೆ 2 ವಿಕೆಟ್ ಕಳೆದುಕೊಂಡ ಬಳಿಕ ನಿಧಾನವಾಗಿ ಶೇಷ ಭಾರತ ತಂಡ ಚೇತರಿಕೆಯ ಪ್ರದರ್ಶನ ನೀಡಿತು. ಕರುಣ್ ನಾಯರ್(28) ಹಾಗೂ ಪೂಜಾರ 4ನೆ ವಿಕೆಟ್‌ಗೆ ಉಪಯುಕ್ತ 45 ರನ್ ಜೊತೆಯಾಟ ನಡೆಸಿದರು. ಟೀ ವಿರಾಮಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕರುಣ್ ನಾಯರ್ ಅವರು ಗಜ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃಢಚಿತ್ತದಿಂದ ಆಡಿದ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 38ನೆ ಅರ್ಧಶತಕ ಬಾರಿಸಿದರು. ಮನೋಜ್ ತಿವಾರಿ35 ಎಸೆತಗಳಲ್ಲಿ 2 ಬೌಂಡರಿ ಬಾರಿಸಿದರು. ಆದರೆ, ಚೊಚ್ಚಲ ಪಂದ್ಯ ಆಡಿರುವ ಥಡಾನಿ ಅವರು ತಿವಾರಿಯನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಖಾತೆ ತೆರೆಯಲು ಥಡಾನಿ ಅವಕಾಶ ನೀಡಲಿಲ್ಲ.

ಈಶ್ವರ್ ಚೌಧರಿ ಅವರು 63ನೆ ಓವರ್‌ನಲ್ಲಿ ಪೂಜಾರ ವಿಕೆಟ್ ಕಬಳಿಸಿ ಗುಜರಾತ್‌ಗೆ ಮೇಲುಗೈ ಒದಗಿಸಿಕೊಟ್ಟರು. ಬಾಲಂಗೋಚಿಗಳಾದ ಶಹಬಾಝ್ ನದೀಮ್ ಹಾಗೂ ಸಿದ್ದಾರ್ಥ್ ಕೌಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಶೇಷ ಭಾರತ ತಂಡ 2ನೆ ದಿನದಾಟದಂತ್ಯಕ್ಕೆ 206 ರನ್‌ಗೆ 9 ವಿಕೆಟ್ ಕಳೆದುಕೊಂಡಿತು.

ಗುಜರಾತ್ 358: ಇದಕ್ಕೆ ಮೊದಲು 8 ವಿಕೆಟ್ ನಷ್ಟಕ್ಕೆ 300 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಗುಜರಾತ್‌ನ ಪರ ಗಾಂಧಿ ಹಾಗೂ ಹಾರ್ದಿಕ್(9) 9ನೆ ವಿಕೆಟ್‌ಗೆ 72 ರನ್ ಸೇರಿಸಿದರು.

  ಮೊದಲ ದಿನದಾಟದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನು ಪೂರೈಸಿದ್ದ ಗಾಂಧಿ ಎರಡನೆ ದಿನದಾಟದಲ್ಲಿ ಕೆಲವೊಂದು ಆಕರ್ಷಕ ಬೌಂಡರಿ ಬಾರಿಸಿದರು.

ಒಟ್ಟಿಗೆ 9 ವಿಕೆಟ್‌ಗಳನ್ನು ಕಬಳಿಸಿದ ಪಂಕಜ್ ಸಿಂಗ್(4-104) ಹಾಗೂ ಸಿದ್ದಾರ್ಥ್ ಕೌಲ್(5-86) ಕೊನೆಗೂ ಗುಜರಾತ್‌ನ್ನು 358 ರನ್‌ಗೆ ಆಲೌಟ್ ಮಾಡಿದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಪ್ರಥಮ ಇನಿಂಗ್ಸ್: 358 ರನ್‌ಗೆ ಆಲೌಟ್

(ಚಿರಾಗ್ ಗಾಂಧಿ 169, ಜುನೇಜ 47, ರಾವಲ್ 39, ಸಿದ್ದಾರ್ಥ್ ಕೌಲ್ 5-86, ಪಂಕಜ್ ಸಿಂಗ್ 4-104)

ರೆಸ್ಟ್ ಆಫ್ ಇಂಡಿಯಾ ಪ್ರಥಮ ಇನಿಂಗ್ಸ್:72 ಓವರ್‌ಗಳಲ್ಲಿ 206/9

(ಚೇತೇಶ್ವರ ಪೂಜಾರ 86, ಹೆರ್ವಾಡ್ಕರ್ 48, ಕರುಣ್ ನಾಯರ್ 28, ಗಜ 3-46, ಹಾರ್ದಿಕ್ ಪಟೇಲ್ 3-73, ಥಡಾನಿ 2-48)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News