ಆಸ್ಟ್ರೇಲಿಯನ್ ಓಪನ್: ನಡಾಲ್, ರಾವೊನಿಕ್, ಸೆರೆನಾ ಅಂತಿಮ-16ಕ್ಕೆ

Update: 2017-01-21 17:34 GMT

  ಮೆಲ್ಬೋರ್ನ್, ಜ.21: ಸ್ಪೇನ್ ಆಟಗಾರ ರಫೆಲ್ ನಡಾಲ್, ಕೆನಡಾದ ಮಿಲಾಸ್ ರಾವೊನಿಕ್ ಹಾಗೂ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾಲ್ಕನೆ ಸುತ್ತಿಗೆ ತೇರ್ಗಡೆಯಾದರು.

ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ರಾಡ್ ಲಾವೆರ್ ಅರೆನಾದಲ್ಲಿ ನಾಲ್ಕು ಗಂಟೆ, ಆರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜರ್ಮನಿಯ ಉದಯೋನ್ಮುಖ ಆಟಗಾರ ಅಲೆಕ್ಸಾಂಡರ್ ಝ್ವೆರೆವ್‌ರನ್ನು 4-6, 6-3, 6-7(5/7),6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

   26 ಐದು ಸೆಟ್‌ಗಳ ಅಂತರದಲ್ಲಿ 18ನೆ ಬಾರಿ ನಡಾಲ್ ಜಯ ಸಾಧಿಸಿದ್ದಾರೆ. ಅಂತಿಮ 16ರ ಸುತ್ತಿನಲ್ಲಿ ಫ್ರಾನ್ಸ್‌ನ ಗಾಯೆಲ್ ಮೊನ್‌ಫಿಲ್ಸ್‌ರನ್ನು ಎದುರಿಸಲಿದ್ದಾರೆ. ಮೊನ್‌ಫಿಲ್ಸ್ ಜರ್ಮನಿಯ ಫಿಲಿಪ್ ಕೊಹ್ಲ್ಸ್‌ಕ್ರೈಬೆರ್‌ರನ್ನು 6-3, 7-6(7/1),6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಮೆಲ್ಬೋರ್ನ್‌ನಲ್ಲಿ ಮೂರನೆ ಬಾರಿ ಅಂತಿಮ-16 ಸುತ್ತು ತಲುಪಿದ್ದಾರೆ.

12ನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸ್ಪರ್ಧಿಸುತ್ತಿರುವ ನಡಾಲ್ 10ನೆ ಬಾರಿ ಅಂತಿಮ-16ರ ಸುತ್ತಿಗೆ ಪ್ರವೇಶಿಸಿದ್ದಾರೆ. 2009ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರೋಜರ್ ಫೆಡರರ್‌ರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದ ನಡಾಲ್ ಇದೀಗ ಎರಡನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಫ್ರಾನ್ಸ್‌ನ ಗಿಲ್ಲೆಸ್ ಸೈಮನ್‌ರನ್ನು 6-2, 7-6(7/5), 3-6, 6-3 ಸೆಟ್‌ಗಳ ಅಂತರದಿಂದ ಮಣಿಸಿದ ಕೆನಡಾದ ಮಿಲಾಸ್ ರಾವೊನಿಕ್ ಅಂತಿಮ 16ರ ಸುತ್ತಿಗೆ ತಲುಪಿದ್ದಾರೆ.

ಕಳೆದ ವರ್ಷ ಮೆಲ್ಬೋರ್ನ್‌ನಲ್ಲಿ ನಡೆದ ಸೆಮಿ ಫೈನಲ್‌ನಲ್ಲಿ ರಾವೊನಿಕ್ ಅವರು ಆ್ಯಂಡಿ ಮರ್ರೆ ವಿರುದ್ಧ ಸೋತಿದ್ದರು. ರಾವೊನಿಕ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ 13ನೆ ಶ್ರೇಯಾಂಕಿತೆ ರಾಬರ್ಟೊ ಬೌಟಿಸ್ಟಾರನ್ನು ಎದುರಿಸಲಿದ್ದಾರೆ. 26ರ ಪ್ರಾಯದ ರಾವೊನಿಕ್ ಕಳೆದ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಕೆನಡಾದ ಮೊದಲ ಆಟಗಾರ ಎನಿಸಿಕೊಂಡಿದ್ದರು.

ಪ್ರಿ-ಕ್ವಾರ್ಟರ್ ಫೈನಲ್‌ಗೆ ಸೆರೆನಾ: ಆರು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ನಿಕೊಲ್ ಗಿಬ್ಸ್‌ರನ್ನು 6-1, 6-3 ಸೆಟ್‌ಗಳಿಂದ ಗೆಲುವು ಸಾಧಿಸಿ ಅಂತಿಮ-16ರ ಸುತ್ತಿಗೆ ತೇರ್ಗಡೆಯಾದರು.

ಸೆರೆನಾ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.16ನೆ ಆಟಗಾರ್ತಿ ಬಾರ್ಬೊರ ಸ್ಟ್ರೈಕೋವಾರನ್ನು ಎದುರಿಸಲಿದ್ದಾರೆ. ಬಾರ್ಬೊರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕ್ಯಾರೊಲಿನಾ ಗಾರ್ಸಿಯಾರನ್ನು 6-2, 7-5 ಸೆಟ್‌ಗಳ ಅಂತರದಿಂದ ಸೋಲಿಸಿದ್ದರು. ರಶ್ಯದ ಎಕಟೆರಿನಾ ಮಕರೋವಾ ಡಬ್ಲುಟಿಎ ಫೈನಲ್ಸ್ ಚಾಂಪಿಯನ್ ಡೊಮಿನಿಕಾ ಸಿಬುಲ್ಕೋವಾರನ್ನು 6-2, 6-7(3), 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಮಕರೋವಾ ಮುಂದಿನ ಸುತ್ತಿನಲ್ಲಿ ಜೊಹನ್ನಾ ಕಾಂಟಾ ಅಥವಾ ಕ್ಯಾರೊಲಿನ್ ವೋಜ್ನಿಯಾಕಿ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News