×
Ad

ಸಂಸತ್ತು ಹಿರಿಯ ಪ್ರಜೆಗಳ ಕುರಿತು ಪರಿಷ್ಕೃತ ನೀತಿಯನ್ನು ಅಂಗೀಕರಿಸಬೇಕು:ಎನ್‌ಜಿಒ

Update: 2017-01-22 18:29 IST

ಹೊಸದಿಲ್ಲಿ,ಜ.22: ದೇಶದಲ್ಲಿ ಹಿರಿಯ ಪ್ರಜೆಗಳ ಸಂಖ್ಯೆಯು ಹೆಚ್ಚುತ್ತಿದ್ದು, ಅವರ ಕಲ್ಯಾಣ ಕುರಿತು ರಾಷ್ಟ್ರೀಯ ನೀತಿಯೊಂದನ್ನು ಸಂಸತ್ತು ಅಂಗಿಕರಿಸಬೇಕು ಎಂದು ಎನ್‌ಜಿಒ ಹೆಲ್ಪ್‌ಏಜ್ ಇಂಡಿಯಾ ಸರ್ವೋಚ್ಚ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದೆ.

 ಹಿರಿಯ ವ್ಯಕ್ತಿಗಳಿಗಾಗಿ ನೀತಿಗಳು ಮತ್ತು ಸಲಹೆಗಳ ವರದಿಗಳನ್ನು ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ಪಿ.ಸಿ.ಪಂತ್ ಅವರ ಪೀಠಕ್ಕೆ ಸಲ್ಲಿಸಲಾಗಿದ್ದು, ಅವುಗಳನ್ನು ದಾಖಲಿಸಿಕೊಂಡ ಪೀಠವು ಅವನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.

  ಸರ್ವೋಚ್ಚ ನ್ಯಾಯಾಲಯವು ಹಿರಿಯ ವ್ಯಕ್ತಿಗಳಿಗಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವಂತೆ ಕೋರಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ನ್ಯಾಯವಾದಿ ಅಶ್ವಿನಿ ಕುಮಾರ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೆಲ್ಪ್ ಏಜ್ ಅನ್ನು ನ್ಯಾಯಾಲಯದ ಸಲಹೆಗಾರನಾಗಿ ನೇಮಿಸಿದೆ.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.27ಕ್ಕೆ ನಿಗದಿಗೊಳಿಸಿತು.

ಜನಗಣತಿಯಂತೆ ಭಾರತದಲ್ಲಿ 60 ವರ್ಷಕ್ಕೂ ಹಿರಿಯ ವ್ಯಕ್ತಿಗಳ ಸಂಖ್ಯೆ 2011ರಲ್ಲಿ 10.3 ಕೋಟಿ ಇದ್ದು, 2015ರಲ್ಲಿ 10.8 ಕೋಟಿಗೇರಿತ್ತು ಎಂದು ತನ್ನ ವರದಿಯಲ್ಲಿ ತಿಳಿಸಿರುವ ಎನ್‌ಜಿಒ, ಹಿರಿಯ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ನೀತಿ,1999ರ ಪರಿಷ್ಕರಣೆ ಮತ್ತು ಬದಲಾವಣೆಗಾಗಿ ಭಾರೀ ಬೇಡಿಕೆಯಿದೆ. ಕೇಂದ್ರವು ರಚಿಸಿದ್ದ ವಿ.ಮೋಹಿನಿ ಗಿರಿ ಅಧ್ಯಕ್ಷತೆಯ ಸಮಿತಿಯು ಹಿರಿಯ ಪ್ರಜೆಗಳ ಕುರಿತು ಕರಡು ರಾಷ್ಟ್ರೀಯ ನೀತಿಯನ್ನು 2011,ಮಾ.30ರಂದು ಸಲ್ಲಿಸಿತ್ತು. ಆದರೆ ಐದು ವರ್ಷಗಳು ಕಳೆದರೂ ಇದನ್ನು ಅಂತಿಮಗೊಳಿಸಲಾಗಿಲ್ಲ ಮತ್ತು ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News