ಕೇಂದ್ರ ಬಜೆಟ್ ಮತದಾರರ ಮೇಲೆ ಪ್ರಭಾವ ಬೀರದು:ಸುಪ್ರೀಂಕೋರ್ಟ್

Update: 2017-01-23 13:11 GMT

ಹೊಸದಿಲ್ಲಿ, ಜ.23: ಕೇಂದ್ರದ ವಾರ್ಷಿಕ ಬಜೆಟ್ ನಿಗದಿಯಂತೆಯೇ ಫೆ.1 ರಂದು ನಡೆಯಬೇಕು. ಬಜೆಟ್ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

 ಚುನಾವಣೆಯ ಸಮಯದಲ್ಲಿ ಬಜೆಟ್ ಮಂಡಿಸುವುದಕ್ಕೆ ಅವಕಾಶ ನೀಡಬಾರದು. ಬಜೆಟ್ ದಿನಾಂಕ ಮುಂದೂಡುವಂತೆ ಆದೇಶಿಸಬೇಕು ಎಂದು ವಕೀಲ ಮನೋಹರ್‌ಲಾಲ್ ಶರ್ಮ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು.

ಕೇಂದ್ರ ಬಜೆಟ್ ಮಂಡನೆಯ ದಿನಾಂಕ ಬದಲಾವಣೆ ಮಾಡಲಾಗದು. ವರ್ಷವಿಡೀ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮಂಡಿಸುವುದು ಬೇಡವೇ?ಎಂದು ಪ್ರಶ್ನಿಸಿರುವ ನ್ಯಾಯಾಲಯ, ಮನೋಹರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸಿತು.

ಜನಪ್ರಿಯ ಭರವಸೆಯ ಮೂಲಕ ಕೇಂದ್ರ ಸರಕಾರ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಕೇಂದ್ರ ಇಲ್ಲವೇ ರಾಜ್ಯಗಳಲ್ಲಿ ಪಕ್ಷವೊಂದು ಅಧಿಕಾರಕ್ಕೆ ಬರಲು ಮತದಾರರನ್ನು ಸೆಳೆಯಲು ಯಾವುದೇ ಆಮಿಷ ಒಡ್ಡುವುದಕ್ಕೆ ಚುನಾವಣಾ ನಿಯಮದಲ್ಲಿ ಅವಕಾಶವೇ ಇಲ್ಲ ಎಂದು ಎಂಎಲ್ ಶರ್ಮ ವಾದಿಸಿದರು.

ಕೇಂದ್ರ ಸರಕಾರ ಸಚಿವ ಸಂಪುಟ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ರೈಲ್ವೇ ಬಜೆಟ್‌ನ್ನು ವಾರ್ಷಿಕ ಬಜೆಟ್‌ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿತ್ತು. 100 ವರ್ಷದಿಂದ ನಡೆದುಕೊಂಡ ಬಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸದಿರಲು ನಿರ್ಧರಿಸಲಾಗಿತ್ತು. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫೆ.4 ರಿಂದ ಆರಂಭವಾಗಲಿದ್ದು, ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಫೆ.4 ರಂದು ನಡೆಯಲಿದೆ. ಆ ಬಳಿಕ ಉತ್ತರಖಂಡ, ಉತ್ತರಪ್ರದೇಶ, ಮಣಿಪುರದಲ್ಲಿ ನಡೆಯಲಿದೆ. ಮಾ.11 ರಂದು ಎಲ್ಲ 5 ರಾಜ್ಯಗಳ ಫಲಿತಾಂಶ ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News