​ಆಗ್ನೇಯ ಅಮೆರಿಕಕ್ಕೆ ಬಡಿದ ಚಂಡಮಾರುತ; 18 ಸಾವು

Update: 2017-01-23 14:24 GMT

ವಾಶಿಂಗ್ಟನ್, ಜ. 23: ಆಗ್ನೇಯ ಅಮೆರಿಕಕ್ಕೆ ಪ್ರಬಲ ಚಂಡಮಾರುತ ಅಪ್ಪಳಿಸಿದ್ದು, 18 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದೇ ವೇಳೆ, ಭೀಕರ ಹವಾಮಾನ ವೈಪರೀತ್ಯವು ನಾಶ-ನಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಜಾರ್ಜಿಯ ರಾಜ್ಯದ ಡೌಗರ್ಟಿ ಕೌಂಟಿಯಲ್ಲಿ ಹಲವು ಕುಟುಂಬಗಳು ರವಿವಾರ ರಸ್ತೆಯ ಬದಿಯಲ್ಲಿ ಕಾಲ ಕಳೆದವು.

ನಿರಾಶ್ರಿತರಿಗೆ ವಾಸಿಸಲು ತಾತ್ಕಾಲಿಕ ಡೇರೆಗಳನ್ನು ನಿರ್ಮಿಸಲಾಗಿದೆ ಎಂದು ಕೌಂಟಿಯ ತುರ್ತು ನಿರ್ವಹಣಾ ಸಂಸ್ಥೆ ಟ್ವೀಟ್ ಮಾಡಿದೆ. ದಕ್ಷಿಣ-ಮಧ್ಯ ಜಾರ್ಜಿಯದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ತುರ್ತು ನಿರ್ವಹಣೆ ಮತ್ತು ಆಂತರಿಕ ಭದ್ರತಾ ಸಂಸ್ಥೆ ತಿಳಿಸಿದೆ. ಐವರು ಈಗಲೂ ನಾಪತ್ತೆಯಾಗಿದ್ದಾರೆ. ಇಲ್ಲಿನ ಮನೆಗಳು ಧರಾಶಾಯಿಯಾಗಿವೆ ಹಾಗೂ ಮರಗಳು ಮತ್ತು ಕಾರುಗಳು ಆಟಿಕೆಗಳಂತೆ ರಾಶಿ ಬಿದ್ದಿವೆ.
ಶನಿವಾರ ಬೆಳಗ್ಗೆ ಮಿಸಿಸಿಪ್ಪಿಯ ದಕ್ಷಿಣ ಭಾಗದಲ್ಲಿ ಬೀಸಿದ ಚಂಡಮಾರುತದಿಂದ ನಾಲ್ವರು ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News