‘ಅನುಚಿತ ದಾಳಿ’ ನಡೆಸುತ್ತಿರುವ ಮಾಧ್ಯಮದ ವಿರುದ್ಧ ‘ಖಡಾಖಂಡಿತ’ ಹೋರಾಟ: ಡೊನಾಲ್ಡ್ ಟ್ರಂಪ್ ತಂಡ

Update: 2017-01-23 14:28 GMT

ವಾಶಿಂಗ್ಟನ್, ಜ. 23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ‘ಅನುಚಿತ ದಾಳಿಗಳನ್ನು’ ನಡೆಸುತ್ತಿರುವ ಸುದ್ದಿ ಮಾಧ್ಯಮದ ವಿರುದ್ಧ ‘ಖಡಾಖಂಡಿತ’ವಾಗಿ ಹೋರಾಡುವ ಪಣವನ್ನು ರವಿವಾರ ಶ್ವೇತಭವನ ತೊಟ್ಟಿದೆ. ಇದರೊಂದಿಗೆ ಈಗಾಗಲೇ ಇರುವ ಎಣ್ಣೆ-ಸೀಗೆಕಾಯಿ ಸಂಬಂಧವು ಹಾವು-ಮುಂಗುಸಿ ಕಾದಾಟಕ್ಕೆ ತಿರುಗಲು ವೇದಿಕೆ ಸಿದ್ಧವಾದಂತಿದೆ.

ಶನಿವಾರ ಸಿಐಎ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಟ್ರಂಪ್, ತನ್ನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೆರೆದಿದ್ದ ಜನರ ಸಂಖ್ಯೆಯನ್ನು ಮಾಧ್ಯಮಗಳು ಕಡಿಮೆ ಮಾಡಿ ವರದಿ ಮಾಡಿವೆ ಎಂದು ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ಅದಾದ ಒಂದು ದಿನದ ಬಳಿಕ, ರವಿವಾರ, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ರೀನ್ಸ್ ಪ್ರೈಬಸ್, ಮಾಧ್ಯಮ ವರದಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಅವುಗಳು ‘ಟ್ರಂಪ್ ಮೇಲೆ ನಡೆಸಲಾದ ದಾಳಿಗಳು’ ಎಂದು ಬಣ್ಣಿಸಿದರು.

‘‘ವಿಷಯ ಸಭಿಕರ ಗಾತ್ರದ್ದಲ್ಲ. ಒಂದೇ ದಿನದಲ್ಲಿ ಈ ಅಧ್ಯಕ್ಷರ ಮೇಲೆ ದಾಳಿ ನಡೆಸಿ ಅವರ ಕಾನೂನು ಸಿಂಧುತ್ವವನ್ನು ಪ್ರಶ್ನಿಸಲು ನಡೆಸಲಾಗುತ್ತಿರುವ ಪ್ರಯತ್ನಗಳು ಈಗಿನ ವಿಷಯ. ನಾವು ಇದನ್ನು ಸುಮ್ಮನೆ ಕುಳಿತುಕೊಂಡು ಸ್ವೀಕರಿಸುವುದಿಲ್ಲ’’ ಎಂದು ‘ಫಾಕ್ಸ್ ನ್ಯೂಸ್ ಸಂಡೆ’ಯಲ್ಲಿ ಪ್ರೈಬಸ್ ಹೇಳಿದರು.
 ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಪ್ರತಿಮೆಯನ್ನು ಓವಲ್ ಕಚೇರಿಯಿಂದ ತೆರವುಗೊಳಿಸಲಾಗಿದೆ ಎಂಬ ವರದಿಗೆ ಪ್ರೈಬಸ್ ಆಕ್ಷೇಪ ವ್ಯಕ್ತಪಡಿಸಿದರು. ಶುಕ್ರವಾರ ರಾತ್ರಿ ಪ್ರಕಟಗೊಂಡ ವರದಿಯನ್ನು ತಕ್ಷಣ ಸರಿಪಡಿಸಲಾಗಿತ್ತು. ಆದರೆ, ಟ್ರಂಪ್ ಶನಿವಾರ ಟ್ರಂಪ್ ಸಿಐಎ ಕಚೇರಿಯಲ್ಲಿ ವರದಿಗಾರನ ಹೆಸರು ಹೇಳಿ ವರದಿಯನ್ನು ಪ್ರಸ್ತಾಪಿಸಿದರು.

‘‘ನಾವು ಪ್ರತಿ ದಿನ ಖಡಖಂಡಿತ ಹೋರಾಟ ನಡೆಸುತ್ತೇವೆ ಹಾಗೂ ರವಿವಾರಗಳಂದು ಎರಡು ಬಾರಿ ಹೋರಾಡ ನಡೆಸುತ್ತೇವೆ’’ ಎಂದು ಪ್ರೈಬಸ್ ನುಡಿದರು.

ಶುಕ್ರವಾರ ಅಧಿಕಾರ ಸ್ವೀಕಾರ ಸಮಾರಂಭ ನಡೆದ ‘ನ್ಯಾಶನಲ್ ಮಾಲ್’ನ ಚಿತ್ರಗಳಲ್ಲಿ ಸಭಿಕರ ಸಂಖ್ಯೆಯನ್ನು ಕಡಿಮೆ ಎಂಬಂತೆ ಬಿಂಬಿಸಲು ಹಸ್ತಕ್ಷೇಪ ನಡೆಸಲಾಗಿದೆ ಎಂದು ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರು ಆರೋಪಿಸಿದರು.

2009ರಲ್ಲಿ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ನೆರೆದಿದ್ದ ಪ್ರೇಕ್ಷಕರ ಸಂಖ್ಯೆಗಿಂತ ಟ್ರಂಪ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರ ಸಂಖ್ಯೆಯು ಕಡಿಮೆ ಎಂಬಂತೆ ವಿಹಂಗಮ (ಮೇಲಿನಿಂದ ತೆಗೆದ) ಚಿತ್ರಗಳು ತೋರಿಸಿದ್ದವು.

ಮಹಿಳಾ ಪ್ರತಿಭಟನೆಯೂ ಬೃಹತ್!

ಟ್ರಂಪ್ ವಿರುದ್ಧ ಶನಿವಾರ ನಡೆದ ಮಹಿಳೆಯರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಸಂಖ್ಯೆಯೂ ಟ್ರಂಪ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದವರ ಸಂಖ್ಯೆಗಿಂತ ಹೆಚ್ಚಾಗಿತ್ತು.

ಶನಿವಾರ ಸ್ಥಳೀಯ ಸಮಯ ಬೆಳಗ್ಗಿನ 11 ಗಂಟೆ ಹೊತ್ತಿಗೆ (ಮಹಿಳೆಯರ ಪ್ರತಿಭಟನೆ ನಡೆದ ಸಮಯದಲ್ಲಿ) 2.75 ಲಕ್ಷ ಜನರು ಆಗಮಿಸಿದ್ದಾರೆ ಎಂದು ವಾಶಿಂಗ್ಟನ್ ಸಬ್‌ವೇ ಸಿಸ್ಟಮ್ ವರದಿ ಮಾಡಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ (ಟ್ರಂಪ್ ಅಧಿಕಾರ ಸ್ವೀಕರ ಸಮಾರಂಭದಲ್ಲಿ) 1.93 ಲಕ್ಷ ಮಂದಿ ಸಬ್‌ವೇ ಸಿಸ್ಟಮ್ ಪ್ರವೇಶಿಸಿದ್ದರು ಎಂದು ಅದು ಹೇಳಿದೆ.
2009ರಲ್ಲಿ ನಡೆದ ಒಬಾಮ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ 5.13 ಲಕ್ಷ ಮಂದಿ ವಾಶಿಂಗ್ಟನ್ ಸಬ್‌ವೇ ಸಿಸ್ಟಮ್ ಪ್ರವೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News