ನಿರ್ವಸಿತ ಕೊರಗ ಸಮುದಾಯದ ಕುಟುಂಬಗಳಿಗೆ ನ್ಯಾಯಕ್ಕಾಗಿ ಆಗ್ರಹ

Update: 2017-01-23 14:48 GMT

ಮಂಗಳೂರು, ಜ.23: ನಂತೂರಿನಲ್ಲಿ ಹೆದ್ದಾರಿ ನಿರ್ಮಾಣ ಸಂದರ್ಭ ಇಲ್ಲಿನ ಮೂಲ ನಿವಾಸಿ ಕೊರಗ ಸಮುದಾಯದ ಕುಟುಂಬಗಳು ಬೀದಿ ಪಾಲಾಗಿವೆ. ಸಂಘಟನೆಯ ಹೋರಾಟದ ಫಲವಾಗಿ 2015ರ ಅಕ್ಟೋಬರ್‌ನಲ್ಲಿ ಪದವು ಗ್ರಾಮದಲ್ಲಿ ಹಕ್ಕು ಪತ್ರ ನೀಡಿದೆ. ಇಲ್ಲಿನ ಜಾಗವನ್ನು ಸಮತಟ್ಟು ಮಾಡಲು ಒಂದೂವರೆ ವರ್ಷದಿಂದ ಹೋರಾಟ ಮಾಡುತ್ತಾ ಬಂದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು, ಮಹಾನಗರ ಪಾಲಿಕೆ, ಜಿಲ್ಲಾಡಳಿತದ ವಿಳಂಬ ನೀತಿ ಖಂಡನೀಯ ಎಂದು ಸಿಪಿಎಂ ಮುಖಂಡ ಸುನೀಲ್‌ಕುಮಾರ್ ಬಜಾಲ್ ಹೇಳಿದ್ದಾರೆ.

 ಸೋಮವಾರ ಮಂಗಳೂರು ಮನಪಾ ಮುಂಭಾಗದಲ್ಲಿ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ದಿಲ್ಲಿಯ ಆದಿವಾಸಿ ಅಧಿಕಾರ್ ಮಂಚ್ ಹಾಗೂ ಸಿಪಿಎಂ ವತಿಯಿಂದ ಹಮ್ಮಿಕೊಳ್ಳಲಾದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಕೊರಗ ಸಮುದಾಯದ ಬಗ್ಗೆ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ‘ಹಾದಿ ವಾಸ್ತವ್ಯ’ ಎಂದು ಭೇಟಿ ನೀಡುತ್ತಾರೆ. ಉದ್ಯೋಗಾವಕಾಶ, ಮನೆ ನಿರ್ಮಾಣ, ನಿವೇಶನ ಹಂಚಿಕೆಗಳಂತಹ ಯೋಜನೆಗಳನ್ನು ನೀಡಲಾಗುವುದೆಂದು ಭರವಸೆಯನ್ನು ನೀಡಿ ಹೋಗುತ್ತಾರೆಯೇ ವಿನಃ ಅವುಗಳು ಇಲ್ಲಿಯವರೆಗೂ ಕೊರಗ ಸಮುದಾಯವನ್ನು ತಲುಪಿಲ್ಲ ಎಂದು ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ದ.ಕ. ಜಿಲ್ಲೆಯ ಮೂಲ ನಿವಾಸಿ ಕೊರಗ ಸಮುದಾಯದ ಆರು ಕುಟುಂಬಗಳು ಬೀದಿ ಪಾಲಾಗಿವೆ. ಇದಕ್ಕೆ ಯಾವ ಜನಪ್ರತಿನಿಧಿಗಳೂ ಚಕಾರವೆತ್ತಿಲ್ಲ. ಆರು ವರ್ಷಗಳಲ್ಲಿ ಜನಪ್ರತಿನಿಧಿಗಳು, ಶಾಸಕರು, ಸಂಸದರು, ಸಚಿವರು, ಕಾರ್ಪೊರೇಟರ್, ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಕೊರಗ ಸಮುದಾಯದ ಸಮಸ್ಯೆಗೆ ಇನ್ನೂ ಪರಿಹಾರವಾಗಿಲ್ಲ. ಕೊರಗ ಸಮುದಾಯದವರಿಗೆ ಮನೆ ಕೊಡುವ ವಿಚಾರದಲ್ಲಿ ಮಹಾನಗರ ಪಾಲಿಕೆಗೆ ಎಳ್ಳಷ್ಟು ಕಾಳಜಿ ತೋರಿಸುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ, ಜಿಲ್ಲಾಡಳಿತದ ವತಿಯಿಂದ ಕೊರಗ ಸಮುದಾಯದ ಕುಟುಂಬಗಳಿಗೆ ಜಾಗ ಕೊಡಲು ತುಂಬಾ ಸತಾಯಿಸಿದ್ದಾರೆ. ಕೊನೆಗೆ ಸರಿಪಳ್ಳದಲ್ಲಿ ಜಾಗವನ್ನು ಕೊಟ್ಟರು. ಕಲ್ಲು, ಮರ, ಎತ್ತರ ತಗ್ಗು ದಿಣ್ಣೆಗಳಿಂದ ಕೂಡಿರುವ ಆ ಜಾಗವನ್ನು ಸಮತಟ್ಟು ಮಾಡುವಂತೆ ಒಂದೂವರೆ ವರ್ಷದಿಂದ ಹೋರಾಟ ಮಾಡಿ ಹಲವಾರು ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸ್ಪಂದನೆ ನೀಡಿಲ್ಲ. ಆ ಜಾಗವನ್ನು ಸಮತಟ್ಟು ಮಾಡಿಲ್ಲ. ಮನೆ ಕಟ್ಟುವುದಾದರೂ ಯಾವಾಗ ಎಂದು ಸುನೀಲ್ ಕುಮಾರ್ ಬಜಾಲ್ ಪ್ರಶ್ನಿಸಿದರು.

ಕೊರಗ ಸಮುದಾಯಕ್ಕೆ ಮನೆ ನಿರ್ಮಾಣ ಮಾಡಲು ಐಟಿಡಿಪಿ ವತಿಯಿಂದ ಎರಡು ಲಕ್ಷ ರೂ. ನೀಡಲಾಗುವುದೆಂದು ಹೇಳಿದೆ. ಆದರೆ ಆ ಅಲ್ಪ ಹಣದಲ್ಲಿ ತಗ್ಗು ದಿಣ್ಣೆಯಿಂದ ಕೂಡಿದ ಜಾಗವನ್ನೇ ಸಮತಟ್ಟು ಮಾಡಲು ಆಗುವುದಿಲ್ಲ. ಮನೆ ಕಟ್ಟುವುದಾದರೂ ಹೇಗೆ ? ಫಕೀರನೆಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಹಾಕಿಕೊಳ್ಳುವ ಬಟ್ಟೆ ಲಕ್ಷಾಂತರ ರೂ. ವೆಚ್ಚದ್ದಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಟಾಯ್ಲೆಟ್‌ಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಜನಪ್ರತಿನಿಧಿಗಳ ವೇತನ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಆದರೆ ಸಮಾಜದಲ್ಲಿ ನಿಕೃಷ್ಟವಾಗಿ ಬದುಕುತ್ತಿರುವ ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ಕಟ್ಟಲು ಕನಿಷ್ಠ ಹಣ ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕೊರಗ ಸಮುದಾಯದ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಯೋಜನೆಯನ್ನು ರೂಪಿಸಬೇಕು. ಆರು ವರ್ಷಗಳಿಂದ ಕೊರಗ ಸಮುದಾಯದ ಸಂಕಷ್ಟದಲ್ಲಿದ್ದೂ ಬಾಡಿಗೆ ಹಣವನ್ನು ಕೊಡಬೇಕು ಎಂದು ಹೇಳಲಾಗಿದೆ. ಆ ಬಾಡಿಗೆ ಹಣವನ್ನು ಕೊಡಲೂ ಸತಾಯಿಸಲಾಗುತ್ತಿದೆ. ಮನೆ ನಿರ್ಮಾಣವಾಗಬೇಕೆಂದು ಆಸೆ ಹೊಂದಿದ್ದ ಕೊರಗ ಸಮುದಾಯದ ಕುಟುಂಬಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಷ್ಟಾದರೂ ಆ ಸಮುದಾಯಕ್ಕೆ ಮಹಾನಗರ ಪಾಲಿಕೆ ಸ್ಪಂದಿಸುತ್ತಿಲ್ಲ. ಆ ಜಾಗವನ್ನು ಸಮತಟ್ಟು ಮಾಡುವುದಷ್ಟಲ್ಲದೇ ಶೀಘ್ರದಲ್ಲಿ ಮನೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದರು.

ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಕೊರಗ ಮತ್ತು ಜೇನು ಕೊರಗ ಸಮುದಾಯಗಳು ಮೂಲ ಆದಿವಾಸಿ ಕುಟುಂಬಗಳಾಗಿವೆ. ಹೆದ್ದಾರಿ ನಿರ್ಮಾಣ ಸಂದರ್ಭ ಕೊರಗ ಸಮುದಾಯದ ಆರು ಕುಟುಂಬಗಳನ್ನು ಎತ್ತಂಗಡಿ ಮಾಡಲಾಗಿದೆ. ಅವರಿಗೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ದ.ಕ. ಜಿಲ್ಲೆಯಲ್ಲಿಯೇ ಇದೊಂದು ಕಪ್ಪು ಚುಕ್ಕೆಯಾಗಿ ಉಳಿದಿದೆ. ಕೊರಗ ಸಮುದಾಯಕ್ಕೆ ನೀಡಲಾಗಿರುವ ಜಾಗವನ್ನು ಸಮತಟ್ಟು ಮಾಡಬೇಕು. ಐಟಿಡಿಪಿ ಮೀಸಲು ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ ಕೊಡಬೇಕು. ಅಲ್ಲಿಯವರೆಗೆ ಈ ಆರು ಕುಟುಂಬಗಳಿಗೆ ಪ್ರತೀ ತಿಂಗಳು 2,000 ರೂ.ನ್ನು ಬಾಡಿಗೆ ಹಣವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಸಿಪಿಎಂ ಮುಖಂಡ ವಸಂತ್ ಆಚಾರಿಚಾರ್, ವಾಸುದೇವ ಉಚ್ಚಿಲ ಮಾತನಾಡಿದರು.

ಧರಣಿಯಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳೂರು ಘಟಕದ ಅಧ್ಯಕ್ಷೆ ಶಾಂತಾ ನಾಯ್ಕೆ, ಕಾರ್ಯದರ್ಶಿ ಶಶಿಕಲಾ ಎನ್., ಸಮಿತಿಯ ಮುಖಂಡರಾದ ಲಿಂಗಪ್ಪ ನಂತೂರು, ಜೆ. ಬಾಲಕೃಷ್ಣ, ಯೋಗೀಶ್, ತಿಪ್ಪಣ್ಣ ಕೊಂಚಾಡಿ, ಕಿಶೋರ್, ಸಂತೋಷ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News