ಗಾಂಬಿಯ: ಖಜಾನೆ ಕೊಳ್ಳೆ ಹೊಡೆದ ಜಮ್ಮೇಹ್

Update: 2017-01-23 14:50 GMT

ಬಂಜುಲ್ (ಗಾಂಬಿಯ), ಜ. 23: ಗಾಂಬಿಯದ ಮಾಜಿ ಅಧ್ಯಕ್ಷ ಯಾಹ್ಯಾ ಜಮ್ಮೇಹ್ ಸರಕಾರದ ಖಜಾನೆಯನ್ನು ಕೊಳ್ಳೆಹೊಡೆದಿದ್ದಾರೆ ಹಾಗೂ ತನ್ನ ಅಧಿಕಾರದ ಕೊನೆಯ ವಾರಗಳಲ್ಲಿ ಲಕ್ಷಾಂತರ ಡಾಲರ್‌ಗಳನ್ನು ಕದ್ದಿದ್ದಾರೆ ಎಂದು ನೂತನ ಅಧ್ಯಕ್ಷ ಆದಮ ಬರೊವ್ ರವಿವಾರ ಆರೋಪಿಸಿದ್ದಾರೆ.

ಪಶ್ಚಿಮ ಆಫ್ರಿಕದ ಸಣ್ಣ ದೇಶವಾಗಿರುವ ಗಾಂಬಿಯದಲ್ಲಿ 22 ವರ್ಷಗಳ ಕಾಲ ಆಡಳಿತ ನಡೆಸಿದ ಬಳಿಕ ಜಮ್ಮೇಹ್ ಶನಿವಾರ ದೇಶ ಬಿಟ್ಟು ಹೋಗಿದ್ದಾರೆ. ಅವರು ಈಕ್ವೆಟೋರಿಯಲ್ ಗಿನಿ ದೇಶದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸುತ್ತಾರೆಂದು ನಿರೀಕ್ಷಿಸಲಾಗಿದೆ.

ನೂತನ ಅಧ್ಯಕ್ಷ ಬರೊವ್ ನೆರೆಯ ದೇಶ ಸೆನೆಗಲ್‌ನಲ್ಲಿರುವ ಗಾಂಬಿಯ ದೇಶದ ರಾಯಭಾರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಒಂದು ವಾರಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಅಲ್ಲೇ ಇದ್ದಾರೆ. ಅವರು ಬಂಜುಲ್‌ಗೆ ಹಿಂದಿರುಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುವಂತೆ ಅವರಿಗೆ ಭದ್ರತೆ ಒದಗಿಸಲು ಪಶ್ಚಿಮ ಆಫ್ರಿಕದ ಸೇನೆಯ ತುಕಡಿಯೊಂದು ರವಿವಾರ ಗಾಂಬಿಯಕ್ಕೆ ಆಗಮಿಸಿದೆ.

ಈ ನಡುವೆ, ದೇಶ ಬಿಟ್ಟು ಹೋಗಲು ಅವಕಾಶ ನೀಡುವ ವಾಗ್ದಾನವನ್ನು ಜಮ್ಮೇಹ್‌ಗೆ ನೀಡಿರುವುದು ವಿವಾದವೊಂದಕ್ಕೆ ಕಾರಣವಾಗಿದೆ. ಅದೇ ವೇಳೆ, ಸುಮಾರು 11 ಮಿಲಿಯ ಡಾಲರ್ (ಸುಮಾರು 75 ಕೋಟಿ ರೂಪಾಯಿ) ಮೊತ್ತ ಕಳ್ಳತನವಾಗಿರುವುದು ನೂತನ ಸರಕಾರದ ಗಮನಕ್ಕೆ ಬಂದಿದೆ ಎಂದು ನೂತನ ಅಧ್ಯಕ್ಷರ ಸಹಾಯಕ ಮಾಯಿ ಫಟ್ಟಿ ಹೇಳಿದ್ದಾರೆ.

 ‘‘ಎರಡು ವಾರಗಳ ಅವಧಿಯಲ್ಲಿ 50 ಕೋಟಿ ಡಲಾಸಿ (75 ಕೋಟಿ ರೂಪಾಯಿ) ಹಣವನ್ನು ಜಮ್ಮೇಹ್ ತೆಗೆದಿದ್ದಾರೆ. ಈಗ ಖಜಾನೆ ಹೆಚ್ಚು ಕಡಿಮೆ ಖಾಲಿಯಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News