ಆರೆಸ್ಸೆನ್ ನಾಯಕನ ಮೀಸಲಾತಿ ವಿರೋಧಿ ಹೇಳಿಕೆ ಟೀಕಿಸಿದ ಅಠವಳೆ

Update: 2017-01-23 15:51 GMT

ಹೈದರಾಬಾದ್,ಜ.25: ಮೀಸಲಾತಿ ಬಗ್ಗೆ ಆರೆಸ್ಸೆಸ್ ವಕ್ತಾರ ಮನಮೋಹನ್ ವೈದ್ಯ ಅವರ ಹೇಳಿಕೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಹಾಯಕ ಸಚಿ, ಭಾರತೀಯ ರಿಪಬ್ಲಿಕನ್ ಪಕ್ಷ (ಆರ್‌ಪಿಐ)ದ ನಾಯಕ ರಾಮ್‌ದಾಸ್ ಅಠವಳೆ ಟೀಕಿಸಿದ್ದು, ದೇಶದಿಂದ ಜಾತಿ ಪದ್ಧತಿಯು ತೊಲಗಿದಾಗ ಮಾತ್ರವೇ ಜಾತಿ ಆಧಾರಿತ ಮೀಸಲಾತಿ ಕೊನೆಗೊಳ್ಳಲಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.

  ಹೈದರಾಬಾದ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮೀಸಲಾತಿ ಬಗ್ಗೆ ವೈದ್ಯ ನೀಡಿರುವ ಹೇಳಿಕೆಯು ಅವರ ವೈಯಕ್ತಿಕ ಅನಿಸಿಕೆಯಾಗಿದ್ದು, ಅದನ್ನು ತಾನು ತಿರಸ್ಕರಿಸುವುದಾಗಿ ಹೇಳಿದರು. ಇತ್ತೀಚೆಗೆ ವೈದ್ಯ ಅವರು, ಜಾತಿ ಆಧಾರಿತ ಮೀಸಲಾತಿಯು ಒಂದು ಹಂತದಲ್ಲಿ ಕೊನೆಗೊಳ್ಳಬೇಕಾಗಿದೆಯೆಂದು ಹೇಳುವ ಮೂಲಕ ವಿವಾದದ ಕಿಡಿಯೆಬ್ಬಿಸಿದ್ದರು.

    ವಾಸ್ತವವಾಗಿ ಎಲ್ಲಾ ಜಾತಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಜಾತಿ ಆಧಾರಿತ ಮೀಸಲಾತಿಯನ್ನು ಶೇ.75ರಷ್ಟು ಹೆಚ್ಚಿಸಬೇಕೆಂದು ಆಗ್ರಹಿಸಿದ ಅಠವಳೆ, ಶೇ.25ರಷ್ಟು ಮೀಸಲಾತಿಯನ್ನು ಇತರ ಜಾತಿಗಳ ಅಭ್ಯರ್ಥಿಗಳಿಗೆ ತೆರೆದಿಡಬೇಕೆಂದರು. ತಾನು ಹಾಗೂ ತನ್ನ ಪಕ್ಷವು ಆರ್ಥಿಕ ಮೀಸಲಾತಿಯನ್ನು ಬೆಂಬಲಿಸುವುದಿಲ್ಲವೆಂದುಆರ್‌ಪಿಐನ  ಸಂಸ್ಥಾಪಕರೂ ಆದ ಅಠವಳೆ ತಿಳಿಸಿದರು. ಆರ್‌ಪಿಐ ಕೇಂದ್ರದ ಆಡಳಿತಾರೂಢ ಎನ್‌ಡಿಎ ಸರಕಾರದ ಅಂಗಪಕ್ಷವಾಗಿದೆ. ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತನ್ನ ಬೆಂಬಲ ಘೋಷಿಸಿದ್ದಾರೆಂದು ಅಠವಳೆ ಗಮನಸೆಳೆದರು.

 ಆರ್‌ಪಿಐ ಉತ್ತರಪ್ರದೇಶದಲ್ಲಿ 150 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಇತರ ಕ್ಷೇತ್ರಗಳಲ್ಲಿ ಅದು ಬಿಜೆಪಿಯನ್ನು ಬೆಂಬಲಿಸುತ್ತಿದೆಯೆಂದು ಅಠವಳೆ ತಿಳಿಸಿದರು. ಪಂಜಾಬ್‌ನಲ್ಲಿ ನಾಲ್ಕರಿಂದ ಐದು ಸ್ಥಾನಗಳಲ್ಲಿ, ಮಣಿಪುರದಲ್ಲಿ 10ರಿಂದ 11 ಕ್ಷೇತ್ರಗಳಲ್ಲಿ ಅದು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಯೆಂದರು. ಗೋವಾದಲ್ಲಿ ಮಾತ್ರ ಅದು ಬಿಜೆಪಿಯನ್ನು ಬೆಂಬಲಿಸಲಿದೆಯೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News