ಅಲನ್ ಬಾರ್ಡರ್ ಪದಕ ಗೆದ್ದ ವಾರ್ನರ್

Update: 2017-01-23 17:35 GMT

ಸಿಡ್ನಿ, ಜ.23: ಆಸ್ಟ್ರೇಲಿಯ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸತತ ಎರಡನೆ ಬಾರಿ ಪ್ರತಿಷ್ಠಿತ ಅಲನ್ ಬಾರ್ಡರ್ ಪದಕವನ್ನು ಗೆದ್ದುಕೊಂಡರು.

ತನ್ನ ನಾಯಕ ಸ್ಟೀವನ್ ಸ್ಮಿತ್‌ರಿಂದ ತೀವ್ರ ಸ್ಪರ್ಧೆ ಎದುರಿಸಿದ ವಾರ್ನರ್ ಅವರು ರಿಕಿ ಪಾಂಟಿಂಗ್, ಶೇನ್ ವಾಟ್ಸನ್ ಹಾಗೂ ಮಿಚೆಲ್ ಕ್ಲಾರ್ಕ್ ಬಳಿಕ ಆಸ್ಟ್ರೇಲಿಯದ ಕ್ರಿಕೆಟ್‌ನ ವಾರ್ಷಿಕ ಪದಕ ಪ್ರದಾನ ಸಮಾರಂಭದಲ್ಲಿ ಸತತ 2 ಪದಕ ಜಯಿಸಿದ ಆಸ್ಟ್ರೇಲಿಯದ ನಾಲ್ಕನೆ ಆಟಗಾರನಾಗಿದ್ದಾರೆ.

33ರ ಪ್ರಾಯದ ವಾರ್ನರ್ 269 ಮತಗಳನ್ನು ಪಡೆದರೆ, ಸ್ಮಿತ್ 248 ಹಾಗೂ ಬೌಲರ್ ಮಿಚೆಲ್ ಸ್ಟಾರ್ಕ್ 197 ಮತಗಳನ್ನು ಪಡೆದಿದ್ದರು. ಸಹ ಆಟಗಾರರು, ಮಾಧ್ಯಮ ಹಾಗೂ ಅಂಪೈರ್‌ಗಳು ವರ್ಷದ ಆಟಗಾರನಿಗೆ ಮತ ಹಾಕುತ್ತಾರೆ.

 ಆಸ್ಟ್ರೇಲಿಯದ ಉಪ ನಾಯಕ ವಾರ್ನರ್ ಏಕದಿನ ಅಂತಾರಾಷ್ಟ್ರೀಯ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಹೆಚ್ಚಿನ ಪಂದ್ಯಗಳನ್ನು ಕಳೆದುಕೊಂಡ ಹೊರತಾಗಿಯೂ ಮಿಚೆಲ್ ಸ್ಟಾರ್ಕ್ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಶೇನ್ ವ್ಯಾಟ್ಸನ್ ದಾಖಲೆ ಮೂರನೆ ಬಾರಿ ಟ್ವೆಂಟಿ-20 ಪದಕ ಜಯಿಸಿದರು. ವ್ಯಾಟ್ಸನ್ 298 ರನ್ ಹಾಗೂ 9 ವಿಕೆಟ್‌ಗಳನ್ನು ಕಬಳಿಸಿದ್ದರು.

ಕಳೆದ ವರ್ಷದ ಜ.8ರಿಂದ 2017ರ ಜ.7ರ ತನಕದ ಪ್ರದರ್ಶನವನ್ನು ಆಧರಿಸಿ ಪ್ರಶಸ್ತಿ ಆಯ್ಕೆ ನಡೆದಿದ್ದು, ಈ ಅವಧಿಯಲ್ಲಿ ವಾರ್ನರ್ ತವರು ಮೈದಾನ ಸಿಡ್ನಿಯ ಎಸ್‌ಸಿಜಿಯಲ್ಲಿ ಕೇವಲ 23 ಎಸೆತಗಳಲ್ಲಿ ಟೆಸ್ಟ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ್ದರು. ಏಕದಿನದಲ್ಲಿ 1,388 ರನ್ ಗಳಿಸಿದ್ದ ವಾರ್ನರ್ ಎಲ್ಲ 3 ಮಾದರಿ ಕ್ರಿಕೆಟ್‌ನಲ್ಲಿ ಒಟ್ಟು 2,420 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News