ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಹರಿಯಿತು ರನ್ ಹೊಳೆ

Update: 2017-01-23 17:38 GMT

ಕೋಲ್ಕತಾ, ಜ.23: ಭಾರತ-ಇಂಗ್ಲೆಂಡ್ ನಡುವೆ ಕೋಲ್ಕತಾದ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ರವಿವಾರ ರೋಚಕವಾಗಿ ಕೊನೆಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹಿಂದೆಂದೂ ಕಂಡರಿಯದಷ್ಟು ರನ್ ಹರಿದು ಬಂದಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.

3 ಪಂದ್ಯಗಳ ಏಕದಿನ ಸರಣಿಯ ಅಂಕಿ-ಅಂಶ ಹೀಗಿದೆ...

2,090: ಭಾರತ-ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಒಟ್ಟು 2,090 ರನ್ ದಾಖಲಾಯಿತು. ಮೂರು ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳ ಏಕದಿನ ಸರಣಿಯಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಇದಾಗಿದೆ. ಈ ಹಿಂದೆ 2007ರಲ್ಲಿ ಭಾರತದಲ್ಲಿ ನಡೆದ ಆಫ್ರೊ-ಏಷ್ಯಾಕಪ್‌ನ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1,892 ರನ್ ದಾಖಲಾಗಿತ್ತು.

 06: ಸರಣಿಯಲ್ಲಿ ಆರು ಬಾರಿ 300 ಹಾಗೂ ಅದಕ್ಕಿಂತ ಹೆಚ್ಚು ರನ್ ದಾಖಲಾಯಿತು. ಕೇವಲ ಮೂರು ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 6ಕ್ಕಿಂತ ಹೆಚ್ಚು ಬಾರಿ 300ಪ್ಲಸ್ ಸ್ಕೋರ್ ದಾಖಲಾಗಿದ್ದವು. ಈ ಎಲ್ಲ ಸರಣಿಯಲ್ಲಿ ಕನಿಷ್ಠ ಐದು ಪಂದ್ಯಗಳಿದ್ದವು. ಭಾರತ-ಆಸ್ಟ್ರೇಲಿಯ ನಡುವೆ 2013ರಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ 9 ಬಾರಿ ಗರಿಷ್ಠ ಮೊತ್ತ ದಾಖಲಾಗಿತ್ತು. ಇವೆರಡೂ ತಂಡಗಳ ನಡುವೆ 2016ರಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ 8 ಬಾರಿ 300 ಪ್ಲಸ್ ಸ್ಕೋರ್ ದಾಖಲಾಗಿತ್ತು.

03: ಇಂಗ್ಲೆಂಡ್ ತಂಡ ಭಾರತ ವಿರುದ್ಧ ಪ್ರಸ್ತುತ ಸರಣಿಯಲ್ಲಿ 3 ಬಾರಿ 300ಕ್ಕೂ ಅಧಿಕ ರನ್ ದಾಖಲಿಸಿತು. 2015ರಲ್ಲಿ ನ್ಯೂಝಿಲೆಂಡ್ ವಿರುದ್ಧದ ಸ್ವದೇಶದಲ್ಲಿ ನಡೆದಿದ್ದ ಸರಣಿಯಲ್ಲಿ ನಾಲ್ಕು ಬಾರಿ ಈ ಸಾಧನೆ ಮಾಡಿತ್ತು.

17: ವಿರಾಟ್ ಕೊಹ್ಲಿ ನಾಯಕನಾಗಿ 1000 ರನ್ ಪೂರೈಸಲು 17 ಇನಿಂಗ್ಸ್ ತೆಗೆದುಕೊಂಡರು. ಕೊಹ್ಲಿ ವೇಗವಾಗಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಆಫ್ರಿಕದ ಡಿವಿಲಿಯರ್ಸ್(18) ಸಾಧನೆಯನ್ನು ಸರಿಗಟ್ಟಿದರು. ನಾಯಕನಾಗಿ 17 ಇನಿಂಗ್ಸ್ ಆಡಿರುವ ಕೊಹ್ಲಿ 69ರ ಸರಾಸರಿಯಲ್ಲಿ 5 ಶತಕ ಹಾಗೂ 4 ಅರ್ಧಶತಕ ಬಾರಿಸಿದ್ದರು.

19: ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ 5 ರನ್‌ನಿಂದ ಸೋಲುವ ಮೊದಲು ಸ್ವದೇಶದಲ್ಲಿ ಸತತ 19 ಪಂದ್ಯಗಳಲ್ಲಿ ಜಯಸಾಧಿಸಿತ್ತು. ಈ ಅವಧಿಯಲ್ಲಿ 10 ಟೆಸ್ಟ್‌ನಲ್ಲಿ ಜಯ, 2ರಲ್ಲಿ ಡ್ರಾ ಹಾಗೂ 7 ಏಕದಿನಗಳಲ್ಲಿ ಜಯ ಸಾಧಿಸಿತ್ತು.

03: ಭಾರತ-ಇಂಗ್ಲೆಂಡ್ ಏಕದಿನ ಸರಣಿಯಲ್ಲಿ 3 ಬಾರಿ ಕಡಿಮೆ ಅಂತರದಲ್ಲಿ ಗೆಲುವು ದಾಖಲಾಗಿದೆ. ಆ ಮೂರು ಬಾರಿ ಇಂಗ್ಲೆಂಡ್ ಜಯ ಸಾಧಿಸಿದೆ. 1984ರಲ್ಲಿ ಕಟಕ್‌ನಲ್ಲಿ 1 ರನ್, 2002ರಲ್ಲಿ ದಿಲ್ಲಿಯಲ್ಲಿ 2 ರನ್, ಕೋಲ್ಕತಾದಲ್ಲಿ 5 ರನ್‌ಗಳ ಅಂತರದಲ್ಲಿ ಜಯ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News