ಇರಾನಿ ಕಪ್: ಶೇಷಭಾರತಕ್ಕೆ 379 ರನ್ ಗುರಿ

Update: 2017-01-23 17:40 GMT

ಮುಂಬೈ, ಜ.23: ಇಲ್ಲಿ ನಡೆಯುತ್ತಿರುವ ಇರಾನಿ ಕಪ್‌ನಲ್ಲಿ ಹಾಲಿ ರಣಜಿ ಚಾಂಪಿಯನ್ ಗುಜರಾತ್ ತಂಡ ಶೇಷ ಭಾರತ ತಂಡದ ಗೆಲುವಿಗೆ 379 ರನ್ ಗುರಿ ನೀಡಿದೆ.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಶೇಷ ಭಾರತ ನಾಲ್ಕನೆ ದಿನವಾದ ಸೋಮವಾರ ಆಟ ಕೊನೆಗೊಂಡಾಗ 4 ವಿಕೆಟ್‌ಗಳನಷ್ಟಕ್ಕೆ 266 ರನ್ ಗಳಿಸಿದ್ದು, ಅಂತಿಮ ದಿನವಾದ ಮಂಗಳವಾರ 6 ವಿಕೆಟ್ ನೆರವಿನಿಂದ ಇನ್ನೂ 113 ರನ್ ಗಳಿಸಬೇಕಾಗಿದೆ.

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ(ಅಜೇಯ 123 ರನ್, 214 ಎಸೆತ, 16 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಚೇತೇಶ್ವರ ಪೂಜಾರ(ಅಜೇಯ 83 ರನ್, 181 ಎಸೆತ, 10 ಬೌಂಡರಿ) ಶೇಷ ಭಾರತದ ಗೆಲುವಿಗಾಗಿ ಶ್ರಮಿಸುತ್ತಿದ್ದು, ಆಟವನ್ನು ಐದನೆ ದಿನಕ್ಕೆ ಕಾಯ್ದಿರಿಸಿದ್ದಾರೆ. ಶೇಷ ಭಾರತ 63 ರನ್‌ಗೆ 4 ವಿಕೆಟ್ ಕಳೆದುಕೊಂಡು ಒಂದಾದ ಈ ಜೋಡಿ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 203 ರನ್ ಜೊತೆಯಾಟ ನಡೆಸಿ ರಣಜಿ ಚಾಂಪಿಯನ್ ಗುಜರಾತ್‌ಗೆ ಸವಾಲಾಗಿ ನಿಂತಿದ್ದಾರೆ.

ಗುಜರಾತ್‌ನ ಪರ ಹಾರ್ದಿಕ್ ಪಟೇಲ್(2-59) ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಶೇಷ ಭಾರತದ ಅಗ್ರ ಕ್ರಮಾಂಕದ ಆಟಗಾರರಾದ ಹೇರ್ವಾಡ್ಕರ್(20), ಕರುಣ್ ನಾಯರ್ ಹಾಗೂ ಮುಕುಂದ್(19)ರನ್ನು ಹಾರ್ದಿಕ್ ಪಟೇಲ್ ಹಾಗೂ ಕೆಪಿ ಪಟೇಲ್ ಬೇಗನೆ ಔಟ್ ಮಾಡಿ ಗುಜರಾತ್‌ಗೆ ಮೇಲುಗೈ ಒದಗಿಸಿದ್ದರು.

ಇದಕ್ಕೆ ಮೊದಲು 8 ವಿಕೆಟ್ ನಷ್ಟಕ್ಕೆ 227 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಗುಜರಾತ್ ತಂಡ 246 ರನ್‌ಗೆ ಆಲೌಟಾಯಿತು. ಚಿರಾಗ್ ಗಾಂಧಿ(70) ನಿನ್ನೆಯ ಮೊತ್ತಕ್ಕೆ 15 ರನ್ ಸೇರಿಸಿ ಔಟಾದರು. ಹರ್ಷಲ್ ಪಟೇಲ್(15) ಹಾಗೂ ಥಡಾನಿ(11) ಬೇಗನೆ ಔಟಾದರು.

ಶೇಷ ಭಾರತದ ಪರ ಸ್ಪಿನ್ನರ್ ಎಸ್.ನದೀಮ್(4-64) ಯಶಸ್ವಿ ಬೌಲರ್ ಎನಿಸಿಕೊಂಡರೆ, ಸಿದ್ದಾರ್ಥ್ ಕೌಲ್(3-70) ಹಾಗೂ ಮುಹಮ್ಮದ್ ಸಿರಾಜ್(2-39) ನದೀಮ್‌ಗೆ ಉತ್ತಮ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಮೊದಲ ಇನಿಂಗ್ಸ್: 358

ಗುಜರಾತ್ ಎರಡನೆ ಇನಿಂಗ್ಸ್:246

(ಪಾಂಚಾಲ್ 73, ಗಾಂಧಿ 70, ನದೀಮ್ 4-64, ಕೌಲ್ 3-70)

ರೆಸ್ಟ್ ಆಫ್ ಇಂಡಿಯಾ ಮೊದಲ ಇನಿಂಗ್ಸ್: 226

ರೆಸ್ಟ್ ಆಫ್ ಇಂಡಿಯಾ ಎರಡನೆ ಇನಿಂಗ್ಸ್: 266/4

(ಸಹಾ ಅಜೇಯ 123, ಪೂಜಾರ ಅಜೇಯ 83, ಪಟೇಲ್ 2-59)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News