ಸಿಬಿಐ ಕಟಕಟೆಯಲ್ಲಿ ಮಾಜಿ ಸಿಬಿಐ ಮುಖ್ಯಸ್ಥ ಸಿನ್ಹಾ

Update: 2017-01-23 18:16 GMT

ಹೊಸದಿಲ್ಲಿ, ಜ.23: ಈ ಹಿಂದೆ ಸಿಬಿಐ ಮುಖ್ಯಸ್ಥರಾಗಿದ್ದ ರಂಜಿತ್ ಸಿನ್ಹಾ ಅವರೇ ಈಗ ಸಿಬಿಐ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಕೋಲ್-ಗೇಟ್ ಹಗರಣ ಎಂದು ಕರೆಯಲಾಗುವ ಹಗರಣದಲ್ಲಿ ಆರೋಪಿಗಳನ್ನು ಅಂದಿನ ಸಿಬಿಐ ಮುಖ್ಯಸ್ಥರಾಗಿದ್ದ ರಂಜಿತ್ ಸಿನ್ಹಾ ಅವರು ತಮ್ಮ ಮನೆಯಲ್ಲಿ ಭೇಟಿಯಾಗಿದ್ದರು ಎಂಬ ಆರೋಪವಿದೆ. ಲಂಚ ಸ್ವೀಕರಿಸಿ ಕಲ್ಲಿದ್ದಲ ಗಣಿಗಳನ್ನು ತಮಗೆ ಬೇಕಾದ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿಕೊಟ್ಟ ಈ ಹಗರಣ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭ ನಡೆದಿತ್ತು ಎನ್ನಲಾಗಿದೆ. ರಂಜಿತ್ ಸಿನ್ಹಾ ಅವರನ್ನು ಹಾಲಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ವಿಚಾರಣೆ ನಡೆಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಕೋಲ್-ಗೇಟ್ ಹಗರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿರುವ ವ್ಯಕ್ತಿಗಳನ್ನು ಸುಮಾರು ‘60 ರಿಂದ 70ರಷ್ಟು’ ಬಾರಿ ಸಿನ್ಹಾ ತಮ್ಮ ಮನೆಯಲ್ಲಿ ಭೇಟಿಯಾಗಿದ್ದರು. 2014ರಲ್ಲಿ ನಡೆದ ಈ ಭೇಟಿಯ ಬಗ್ಗೆ ಸಿನ್ಹಾ ಅವರ ಮನೆಯಲ್ಲಿದ್ದ ಸಂದರ್ಶಕರ ಪುಸ್ತಕದಲ್ಲಿ ಉಲ್ಲೇಖವಿದೆ ಎಂದು ಈ ಹಿಂದೆ ಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ತಿಳಿಸಲಾಗಿತ್ತು. ಕಲ್ಲಿದ್ದಲು ಗಣಿಗಳನ್ನು ಪಾರದರ್ಶಕವಲ್ಲದ ರೀತಿಯಲ್ಲಿ ಮತ್ತು ಕಡಿಮೆ ದರಕ್ಕೆ ಹಂಚಿಕೆ ಮಾಡಿದ್ದರಿಂದ ಸರಕಾರಕ್ಕೆ 1.86 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಮಹಾಲೆಕ್ಕ ಪರಿಶೋಧಕರು 2012ರಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಹಂಚಿಕೆಯನ್ನು ರದ್ದು ಮಾಡಬೇಕೆಂದು 2014ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಈ ಪ್ರಕರಣದಲ್ಲಿ ಅಪರಾಧಿ ಎಂದು ಹೆಸರಿಸಿಲ್ಲವಾದರೂ ಅವರು ಕಲ್ಲಿದ್ದಲು ಗಣಿ ಹಂಚಿಕೆಯ ಪ್ರಕ್ರಿಯೆಯಲ್ಲಿ ವಿಶ್ವಾಸಕ್ಕೆ ಧಕ್ಕೆ ತರುವ ರೀತಿ ನಡೆದುಕೊಂಡಿದ್ದಾರೆ ಮತ್ತು ಹಿಂಡಾಲ್ಕೊ ಸಂಸ್ಥೆಗಳಿಗೆ ಕಲ್ಲಿದ್ದಲು ಗಣಿ ಹಂಚಿಕೆ ಮಾಡಿದ ಪ್ರಕರಣದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂಬ ಆರೋಪದಡಿ ವಿಚಾರಣೆಗೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News