ಇ-ಪಾವತಿ ನಿರ್ವಹಣೆಗೆ ಪ್ರತ್ಯೇಕ ನಿಯಂತ್ರಣ ಸಂಸ್ಥೆ

Update: 2017-01-23 18:19 GMT

ಹೊಸದಿಲ್ಲಿ,ಜ.23: ಡಿಜಿಟಲ್ ವಹಿವಾಟಿಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ದೇಶದಲ್ಲಿ ಇಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸಲು ಹಾಗೂ ವಹಿವಾಟು ಶುಲ್ಕಗಳನ್ನು ನಿಯಂತ್ರಿಸಲು ಪ್ರತ್ಯೇಕ ನಿಯಂತ್ರಣ ಮಂಡಳಿ ಯೊಂದನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಿದೆ.

 ಡಿಜಿಟಲ್ ಪಾವತಿ ವ್ಯವಸ್ಥೆಯ ಸುಧಾರಣೆಗಾಗಿ ರಚನೆಯಾದ ರತನ್ ವಾತಾಲ್ ಸಮಿತಿಯು ಇತ್ತೀಚೆಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಇಲೆಕ್ಟ್ರಾನಿಕ್ ಪಾವತಿಯ ನಿಯಂತ್ರಣವನ್ನು, ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾರ್ಯನಿರ್ವಹಣೆಯಿಂದ ಪ್ರತ್ಯೇಕಗೊಳಿಸಬೇಕೆಂದು ಶಿಫಾರಸು ಮಾಡಿದೆಯೆಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಇ-ಪಾವತಿ ವ್ಯವಸ್ಥೆಯ ಮೇಲೆ ತನ್ನ ನಿಯಂತ್ರಣವನ್ನು ಕೈಬಿಡಲು ಆರ್‌ಬಿಐ ಉತ್ಸುಕವಾಗಿಲ್ಲವೆಂದು ಅವು ಹೇಳಿವೆ.
‘‘ಈವರೆಗೆ ಡಿಜಿಟಲ್ ಪಾವತಿಗೆ ಸಂಬಂಧಿಸಿದ ನಿಯಮಾವಳಿಗಳು ಬ್ಯಾಂಕಿಂಗ್ ಕೇಂದ್ರೀಕೃತವಾಗಿದ್ದವು. ಒಂದು ವೇಳೆ ಪ್ರತ್ಯೇಕವಾದ ನಿಯಂತ್ರಕ ಸಂಸ್ಥೆಯಿದ್ದಲ್ಲಿ, ಡಿಜಿಟಲ್ ವಹಿವಾಟುಗಳನ್ನು ಸರಳಗೊಳಿಸುವ ಹಾಗೂ ವೆಚ್ಚವನ್ನು ತಾರ್ಕಿಕಗೊಳಿಸುವ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗಲಿದೆ. ಹೀಗಾಗಿ, ಭಾರತದಲ್ಲಿ ಇಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಸುಗಮಗೊಳಿಸುವ ಪ್ರಾಧಿಕಾರವೊಂದರ ಸ್ಥಾಪನೆಯ ಅಗತ್ಯವಿದೆ’’ ಎಂದು ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 ಭಾರತೀಯ ರಿಸರ್ವ್ ಬ್ಯಾಂಕ್, ವಾತಾಲ್ ಸಮಿತಿಗೆ ನೀಡಿರುವ ವಿವರಣೆಯೊಂದರಲ್ಲಿ ಪಾವತಿಗಳ ಮೇಲಿನ ನಿಯಂತ್ರಣವು ತನ್ನ ಬಳಿಯೇ ಉಳಿಯಬೇಕಿದೆ.ಯಾಕೆಂದರೆ ಹಣದ ಪೂರೈಕೆಯನ್ನು ನಿಯಂತ್ರಿಸುವುದು ಕೇಂದ್ರೀಯ ಬ್ಯಾಂಕ್‌ನ ಸಮಗ್ರ ಕಾರ್ಯನಿರ್ವಹಣೆಯಾಗಿದೆಯೆಂದು ಪ್ರತಿಪಾದಿಸಿದೆ.
ವಾತಾಲ್ ಸಮಿತಿಯು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಕಳೆದ ತಿಂಗಳು ಸಲ್ಲಿಸಿದ ವರದಿಯಲ್ಲಿ ಕೇಂದ್ರ ಬ್ಯಾಂಕ್‌ನ ಕಾರ್ಯನಿರ್ವಹಣೆಯಿಂದ ಇಲೆಕ್ಟ್ರಾನಿಕ್ ಪಾವತಿಗಳನ್ನು ಹೇಗೆ ಪ್ರತ್ಯೇಕವಾಗಿಡಬಹುದೆಂಬ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ.
ನಗದು ಅಮಾನ್ಯದ ಬಳಿಕ ಡಿಸೆಂಬರ್‌ನಲ್ಲಿ ಆರ್‌ಬಿಐಯು ಜನವರಿ 1ರಿಂದ ಮಾರ್ಚ್ 31ರ ತನಕ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡಲಾಗುವ ಪಾವತಿಗಳ ಮೇಲಿನ ವ್ಯಾಪಾರಿ ಕಡಿತ ದರ (ಎಂಡಿಆರ್)ದ ಶುಲ್ಕದಲ್ಲಿ 1 ಸಾವಿರ ರೂ.ವರೆಗಿನ ವಹಿವಾಟುಗಳಿಗೆ ಶೇ.0.25 ಹಾಗೂ 1 ಸಾವಿರ ರೂ.ಗಳಿಂದ 2 ಸಾವಿರ ರೂ.ವರೆಗೆ ಶೇ. 9.25ರಷ್ಟು ಇಳಿಕೆಯನ್ನು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News