ಮೃತರ ಸಂಖ್ಯೆ 41ಕ್ಕೆ ಏರಿಕೆ

Update: 2017-01-23 18:22 GMT

ವಿಜಯನಗರಂ,ಜ.23: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೇರಿದೆ. ಈ ಭೀಕರ ರೈಲು ದುರಂತವು ವಿಧ್ವಂಸಕ ಕೃತ್ಯವಾಗಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಅಪರಾಧ ತನಿಖಾ ದಳ (ಸಿಐಡಿ)ದ ಅಧಿಕಾರಿಗಳು ಅವಘಡದ ಸ್ಥಳಕ್ಕೆ ಆಗಮಿಸಿದ್ದಾರೆ.

ಜಗದಾಳ್‌ಪುರ-ಭುವನೇಶ್ವರ ಹಿರಾಕುಡ್ ಎಕ್ಸ್‌ಪ್ರೆಸ್ ರೈಲು, ಒಡಿಶಾದ ರಾಯಗಡ ಸಮೀಪದ ಕುನೇರ್ ನಿಲ್ದಾಣದಲ್ಲಿ ಶನಿವಾರ ರಾತ್ರಿ 11:30ಕ್ಕೆ ಹಳಿತಪ್ಪಿತ್ತು. ದುರ್ಘಟನೆಯ ಸಂದರ್ಭದಲ್ಲಿ ಈ ರೈಲು ಒಡಿಶಾದ ರಾಜಧಾನಿ ಭುವನೇಶ್ವರದಿಂದ ಚತ್ತೀಸ್‌ಗಢದ ಜಗದಾಲ್‌ಪುರಕ್ಕೆ ಪ್ರಯಾಣಿಸುತ್ತಿತ್ತು. 9 ರೈಲು ಬೋಗಿಗಳು ಹಾಗೂ ಎಂಜಿನ್ ಹಳಿತಪ್ಪಿದ ಪರಿಣಾಮವಾಗಿ 68 ಪ್ರಯಾಣಿಕರು ಗಾಯಗೊಂಡಿದ್ದು, ಅವರಿಗೆ ಆಂಧ್ರ ಹಾಗೂ ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.ಜಗದಾಲ್‌ಪುರ-ಭುವನೇಶ್ವರ ರೈಲು ದುರಂತ ಸಂಭವಿಸಿದ ಸ್ಥಳವು ಆಂಧ್ರ-ಒಡಿಶಾ ಗಡಿಯಲ್ಲಿದ್ದು, ಮಾವೋವಾದಿ ಉಗ್ರರ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿರುವುದರಿಂದ ಇದು ಮಾವೊವಾದಿಗಳ ವಿಧ್ವಂಸ ಕೃತ್ಯವಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದೆಂದು ಅಧಿಕಾರಿಗಳು ಹೇಳಿದ್ದಾರೆ.
 ಉತ್ತರಪ್ರದೇಶದ ಕಾನ್ಪುರದಲ್ಲಿ ಕಳೆದ ವರ್ಷದ ನವೆಂಬರ್ 20ರಂದು 150ಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದ ಘಟನೆಯ ಹಿಂದೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕೈವಾಡವಿರುವ ಸಾಧ್ಯತೆಯ ಬಗ್ಗೆ ಎನ್‌ಐಎ ಈಗಾಗಲೇ ತನಿಖೆಯನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News