×
Ad

ಕೊನೆಯ ಗಂಟೆಗಳಲ್ಲಿ ಫೆಲೆಸ್ತೀನ್‌ಗೆ 1505 ಕೋಟಿ ರೂ. ಬಿಡುಗಡೆ ಮಾಡಿದ ಒಬಾಮ

Update: 2017-01-24 20:07 IST

ವಾಶಿಂಗ್ಟನ್, ಜ. 24: ಒಬಾಮ ಆಡಳಿತ ತನ್ನ ಕೊನೆಯ ಗಂಟೆಗಳಲ್ಲಿ ರಿಪಬ್ಲಿಕನ್ ಪಕ್ಷದ ವಿರೋಧವನ್ನು ಲೆಕ್ಕಿಸದೆ 221 ಮಿಲಿಯ ಡಾಲರ್ (ಸುಮಾರು 1505 ಕೋಟಿ ರೂಪಾಯಿ) ಮೊತ್ತವನ್ನು ಫೆಲೆಸ್ತೀನ್ ಪ್ರಾಧಿಕಾರಕ್ಕೆ ಸದ್ದಿಲ್ಲದೆ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾನು ಹಣವನ್ನು ಖರ್ಚು ಮಾಡುತ್ತಿರುವುದಾಗಿ ನಿರ್ಗಮನ ಸರಕಾರ ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಶುಕ್ರವಾರ ಬೆಳಗ್ಗೆ ಔಪಚಾರಿಕವಾಗಿ ತಿಳಿಸಿತು ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ಗುರುವಾರ ಕೊನೆಯ ಬಾರಿ ವಿದೇಶಾಂಗ ಇಲಾಖೆಯಿಂದ ಹೊರಹೋಗುವ ಸ್ವಲ್ಪ ಹೊತ್ತಿನ ಮೊದಲು ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಈ ಬಗ್ಗೆ ಕೆಲವು ಸಂಸದರಿಗೆ ತಿಳಿಸಿದರು.

ಡೊನಾಲ್ಡ್ ಟ್ರಂಪ್ ಅಧಿಕಾರಿ ಸ್ವೀಕರಿಸುವ ಕೆಲವೇ ಗಂಟೆಗಳ ಮೊದಲು, ಜನವರಿ 20ರ ದಿನಾಂಕದ ಅಧಿಸೂಚನೆಯನ್ನು ಕಾಂಗ್ರೆಸ್‌ಗೆ ಕಳುಹಿಸಲಾಯಿತು ಎಂದು ಅಧಿಕಾರಿ ನುಡಿದರು.

ಫೆಲೆಸ್ತೀನೀಯರಿಗೆ ನೀಡುವ 221 ಮಿಲಿಯ ಡಾಲರ್ ಹೊರತಾಗಿ, ಹವಾಮಾನ ಬದಲಾವಣೆ ಕಾರ್ಯಕ್ರಮಗಳಿಗೆ ನೀಡಲು ಒಪ್ಪಿಕೊಂಡಿರುವ 4 ಮಿಲಿಯ ಡಾಲರ್ (ಸುಮಾರು 27 ಕೋಟಿ ರೂಪಾಯಿ) ಮತ್ತು ವಿಶ್ವಸಂಸ್ಥೆಯ ಘಟಕ ಸಂಸ್ಥೆಗಳಿಗೆ ನೀಡಬೇಕಾಗಿರುವ 1.25 ಮಿಲಿಯ ಡಾಲರ್ (ಸುಮಾರು 8.5 ಕೋಟಿ ರೂಪಾಯಿ) ಮೊತ್ತವನ್ನೂ ಬಿಡುಗಡೆ ಮಾಡಿರುವುದಾಗಿ ಒಬಾಮ ಆಡಳಿತ ಶುಕ್ರವಾರ ಕಾಂಗ್ರೆಸ್‌ಗೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News