ವಿದೇಶದಲ್ಲಿ ಉತ್ಪಾದಿಸಿದರೆ ಭಾರೀ ಗಡಿ ತೆರಿಗೆ :ಅಮೆರಿಕದ ಉದ್ಯಮಿಗಳಿಗೆ ಟ್ರಂಪ್ ಎಚ್ಚರಿಕೆ

Update: 2017-01-24 14:47 GMT

ವಾಶಿಂಗ್ಟನ್, ಜ. 24: ವಿದೇಶಗಳಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕಂಪೆನಿಗಳಿಗೆ ‘ಭಾರೀ ಪ್ರಮಾಣದ ಗಡಿ ತೆರಿಗೆ’ಯನ್ನು ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಉದ್ಯಮಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅದೇ ವೇಳೆ, ತಮ್ಮ ಉತ್ಪನ್ನಗಳನ್ನು ದೇಶದಲ್ಲೇ ಉತ್ಪಾದಿಸುವ ಕಂಪೆನಿಗಳನ್ನು ಪ್ರೋತ್ಸಾಹಿಸಲು ನಿರ್ಬಂಧಗಳು ಮತ್ತು ತೆರಿಗೆಗಳನ್ನು ‘ಬೃಹತ್ ಪ್ರಮಾಣದಲ್ಲಿ’ ಕಡಿತ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಶ್ವೇತಭವನದಲ್ಲಿ 12 ಪ್ರಮುಖ ಉದ್ಯಮ ಪ್ರಮುಖರ ಜೊತೆ ಸಭೆ ನಡೆಸಿದ ಟ್ರಂಪ್, ಈಗ ಉತ್ಪಾದನೆಯು ಬೃಹತ್ ಪ್ರಮಾಣದಲ್ಲಿ ಅಮೆರಿಕಕ್ಕೆ ಮರಳಿ ಬರುತ್ತಿದೆ ಎಂದು ಹೇಳಿದರು. ಒಂದು ವೇಳೆ, ಉದ್ಯೋಗಗಳನ್ನು ವಿದೇಶಗಳಿಗೆ ಸಾಗಿಸಿದರೆ, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

‘‘ಇಲ್ಲಿ ತಮ್ಮ ಉತ್ಪನ್ನಗಳನ್ನು ಉತ್ಪಾದಿಸುವ ಕಂಪೆನಿಗಳಿಗೆ ಹಲವು ಅನುಕೂಲಗಳಿರುತ್ತವೆ. ನಾವು ಅದನ್ನು ಈಗಾಗಲೇ ನೋಡಿದ್ದೇವೆ. ಈಗ ಉದ್ಯೋಗಗಳು ಅಮೆರಿಕಕ್ಕೆ ತೆರೆಗಳೋಪಾದಿಯಲ್ಲಿ ಮರಳಿ ಬರುತ್ತವೆ’’ ಎಂದು ಉದ್ಯಮ ಮುಂದಾಳುಗಳೊಂದಿಗೆ ಮುಂಜಾನೆಯ ಉಪಹಾರ ಮಾಡುತ್ತಾ ಅವರು ಹೇಳಿದರು.

ತಾನು ತೆರಿಗೆಗಳು ಮತ್ತು ನಿರ್ಬಂಧಗಳನ್ನು 75 ಶೇಕಡದಷ್ಟು ಅಥವಾ ಅದಕ್ಕೂ ಹೆಚ್ಚು ಕಡಿತ ಮಾಡುವುದಾಗಿ ಅವರು ಭರವಸೆ ನೀಡಿದರು.


ಏಶ್ಯದೊಂದಿಗಿನ ವ್ಯಾಪಾರ ಒಪ್ಪಂದ ರದ್ದುಪಡಿಸಿದ ಟ್ರಂಪ್:

ಜಾಗತಿಕ ಆರ್ಥಿಕತೆಯಲ್ಲಿ ಅಮೆರಿಕದ ಪಾತ್ರವನ್ನು ಪುನರ್ರೂಪಿಸುವ ಕೆಲಸವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿದ್ದಾರೆ. ಅದರ ಪ್ರಥಮ ಭಾಗವೆಂಬಂತೆ, ಏಶ್ಯದೊಂದಿಗಿನ ಪ್ರಮುಖ ವ್ಯಾಪಾರ ಒಪ್ಪಂದವೊಂದನ್ನು ರದ್ದುಪಡಿಸಿದ್ದಾರೆ.

ಅಮೆರಿಕದ ಉದ್ಯಮಿಗಳೊಂದಿಗೆ ದೇಶದ ಉತ್ಪಾದನಾ ಉದ್ಯಮದ ಬಗ್ಗೆ ಚರ್ಚಿಸಿದ ಬಳಿಕ, ಓವಲ್ ಕಚೇರಿಗೆ ತೆರಳಿದ ಟ್ರಂಪ್, ಪೆಸಿಫಿಕ್ ಸಾಗರದಾಚೆಗಿನ ಭಾಗೀದಾರಿಕೆಯಲ್ಲಿ ಅಮೆರಿಕದ ಭಾಗವಹಿಸುವಿಕೆಯನ್ನು ಕೊನೆಗೊಳಿಸುವ ಸರಕಾರಿ ಆದೇಶಕ್ಕೆ ಸಹಿ ಹಾಕಿದರು.

ನೂತನ ಅಧ್ಯಕ್ಷರ ಈ ನಡೆಯು ಸಾಂಕೇತಿಕವಾಗಿದೆ. ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅವಧಿಯಲ್ಲಿ ತಾನು ಆಡಿರುವ ಕಟು ಮಾತುಗಳನ್ನು ಈಗ ಅಧ್ಯಕ್ಷನಾಗಿ ಜಾರಿಗೆ ತರುತ್ತೇನೆ ಎಂಬ ಸೂಚನೆಯನ್ನು ಅವರು ಈ ಮೂಲಕ ನೀಡಿದ್ದಾರೆ ಎನ್ನಲಾಗಿದೆ.

12 ದೇಶಗಳನ್ನೊಳಗೊಂಡ ಈ ಒಪ್ಪಂದಕ್ಕೆ 2015ರಲ್ಲಿ ಸಹಿ ಹಾಕಲಾಗಿತ್ತು. ಒಪ್ಪಂದವನ್ನು ರದ್ದುದಪಡಿಸುವುದಾಗಿ ಅವರು ತನ್ನ ಚುನಾವಣಾ ಪ್ರಚಾರದ ಅವಧಿಯಲ್ಲಿ ಹೇಳುತ್ತಾ ಬಂದಿದ್ದರು.

ಈ ಒಪ್ಪಂದದ ಮಾತುಕತೆಗಳನ್ನು ಬರಾಕ್ ಒಬಾಮ ಸರಕಾರ ನಡೆಸಿತ್ತು. ಆದರೆ, ಅಮೆರಿಕದ ಸಂಸತ್ತು ಕಾಂಗ್ರೆಸ್ ಅದಕ್ಕೆ ಅನುಮೋದನೆ ನೀಡಿರಲಿಲ್ಲ.

ಚೀನಾವನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕಾಗಿ ಒಬಾಮ ಆಡಳಿತ ತೆಗೆದುಕೊಂಡ ಕ್ರಮ ಅದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News