×
Ad

ರಾಹುಲ್ ದ್ರಾವಿಡ್‌ಗೆ ಎಲ್ಲ ಶ್ರೇಯಸ್ಸು ಸಲ್ಲಬೇಕು: ಪಾಂಡ್ಯ

Update: 2017-01-24 23:32 IST

ವಡೋದರ, ಜ.24: ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಟೀಮ್ ಇಂಡಿಯಾಕ್ಕೆ ವಾಪಸಾದ ಬಳಿಕ ತನ್ನ ಯಶಸ್ಸಿಗೆ ರಾಹುಲ್ ದ್ರಾವಿಡ್‌ರೇ ಕಾರಣ ಎಂದು ಹೇಳಿದ್ದಾರೆ.

ವೇಗದ ಬೌಲಿಂಗ್ ಆಲ್‌ರೌಂಡರ್ ಪಾಂಡ್ಯ ಭಾರತದಲ್ಲಿ ಟ್ವೆಂಟಿ-20 ವಿಶ್ವಕಪ್ ಕೊನೆಗೊಂಡ ಬಳಿಕ ಕಳಪೆ ಫಾರ್ಮ್‌ನಲ್ಲಿದ್ದರು. ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಅವರು ಕಳೆದ ವರ್ಷ ಝಿಂಬಾಬ್ವೆ ಪ್ರವಾಸದಲ್ಲಿ ಭಾರತೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.

‘‘ರಾಹುಲ್ ದ್ರಾವಿಡ್ ಸರ್(ಕೋಚ್) ನನಗೆ ತುಂಬಾ ಸಹಾಯ ಮಾಡಿದ್ದಾರೆ. ನನ್ನ ಪಂದ್ಯದ ಬಗ್ಗೆ ನನ್ನ ಬಳಿ ಮಾತನಾಡುತ್ತಿದ್ದರು. ಪರಾಸ್ ಮಾಂಬ್ರೆ(ಸಹಾಯಕ ಕೋಚ್) ಕೂಡ ನನಗೆ ನೆರವು ನೀಡಿದ್ದರು’’ ಎಂದು ಪಾಂಡ್ಯ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘‘ಟ್ವೆಂಟಿ-20 ವಿಶ್ವಕಪ್‌ನ ಬಳಿಕ ನಾನು ರಿಯಾಲಿಟಿ ಚೆಕ್ ಮಾಡಿದೆ. ನಾನು ಸುಧಾರಿಸಬೇಕಾದ ಅಂಶದ ಬಗ್ಗೆ ದೀರ್ಘ ಯೋಚನೆ ಮಾಡಿದೆ. ಭಾರತ ‘ಎ’ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿತು. ಅದು ನನಗೆ ಅತ್ಯಂತ ಮುಖ್ಯವಾಯಿತು. ನನ್ನ ಪಂದ್ಯದ ಬಗ್ಗೆ ಆಸ್ಟ್ರೇಲಿಯದಲ್ಲಿ ಸಾಕಷ್ಟು ಕಲಿತ್ತಿದ್ದೆ’’ ಎಂದು ಪಾಂಡ್ಯ ಹೇಳಿದ್ದಾರೆ.

 ಆಸ್ಟ್ರೇಲಿಯದಲ್ಲಿ ಭಾರತ ‘ಎ’ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪಾಂಡ್ಯ ಆ ಮೂಲಕ ಭಾರತೀಯ ತಂಡಕ್ಕೆ ವಾಪಸಾಗಿದ್ದರು. ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಪಾದಾರ್ಪಣೆ ಪಂದ್ಯ ಆಡಿದ್ದರು. ಆ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವಕಾಶ ಗಿಟ್ಟಿಸಿಕೊಂಡರು.

ಆದರೆ, ಮೊಹಾಲಿಯಲ್ಲಿ ಮೂರನೆ ಟೆಸ್ಟ್‌ಗಾಗಿ ಅಭ್ಯಾಸ ನಡೆಸುತ್ತಿದ್ದಾಗ ಭುಜ ನೋವಿಗೆ ತುತ್ತಾಗಿದ್ದ ಪಾಂಡ್ಯ ಟೆಸ್ಟ್ ಸರಣಿಯಿಂದಲೇ ಹೊರ ನಡೆದರು. ಚೊಚ್ಚಲ ಟೆಸ್ಟ್ ಪಂದ್ಯ ಆಡುವ ಅವಕಾಶದಿಂದ ವಂಚಿತರಾದರು.

ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಂಡ್ಯಗೆ ಮತ್ತೊಂದು ಅವಕಾಶ ಲಭಿಸಿತು. ಆಂಗ್ಲರ ವಿರುದ್ಧ ಮೊದಲ ಹಾಗೂ ಮೂರನೆ ಏಕದಿನ ಪಂದ್ಯದಲ್ಲಿ ಬ್ಯಾಟ್ ಹಾಗೂ ಬೌಲಿಂಗ್‌ನಲ್ಲಿ ಮಹತ್ವದ ಕೊಡುಗೆ ನೀಡಿದ ಪಾಂಡ್ಯ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದಲ್ಲಿ ಸ್ಥಾನದಲ್ಲಿ ಪಡೆಯುವ ವಿಶ್ವಾಸದಲ್ಲಿದ್ದಾರೆ.

‘‘ವ್ಯಕ್ತಿಯಾಗಿ ನಾವು ನಮ್ಮ ತಪ್ಪನ್ನು ಒಪ್ಪಿಕೊಂಡು ಅದರಿಂದ ಪಾಠ ಕಲಿಯಬೇಕು. ನಾನು 3ನೆ ಏಕದಿನ ಪಂದ್ಯದಲ್ಲಿ ಅಂತಹ ಹೊಡೆತ ಬಾರಿಸಬಾರದಿತ್ತು ಎಂದು ಎನಿಸುತ್ತಿದೆ. ರನ್‌ರೇಟ್ ಏರಿಕೆಯಾಗುತ್ತಿದ್ದ ಕಾರಣ ಅವಕಾಶವನ್ನು ಯಾರಾದರೂ ಪಡೆಯಲೇಬೇಕೆಂಬ ಯೋಚನೆ ನನ್ನಲ್ಲಿತ್ತು’’ಎಂದು ಕೋಲ್ಕತಾ ಏಕದಿನದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದ ಪಾಂಡ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News