ಬೋಗಸ್ ಕಂಪೆನಿಗಳ ಹೆಸರಿನಲ್ಲಿ ನಕಲಿ ಬಿಲ್ ಸಲ್ಲಿಕೆ
ಹೊಸದಿಲ್ಲಿ,ಜ.24: ದಿಲ್ಲಿ ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸಿದ ಆರೋಪದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಾವನ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ಎನ್‌ಜಿಓ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ತನ್ನ ಆರ್ಥಿಕ ಅಪರಾಧ ದಳದ ಮೂಲಕ ತನಿಖೆಯನ್ನು ನಡೆಸಲಿದ್ದಾರೆ.
ಕೇಜ್ರಿವಾಲ್ ಅವರ ಬಾವ, ಸುರೇಂದ್ರ ಕುಮಾರ್ ಬನ್ಸಾಲ್, ಕಟ್ಟಡ ನಿರ್ಮಾಣ ವ್ಯವಹಾರವನ್ನು ನಡೆಸುತ್ತಿದ್ದು, ಅವರು ದೊಡ್ಡ ಪ್ರಮಾಣದ ಲಾಭವನ್ನು ಪಡೆದುಕೊಂಡು ದಿಲ್ಲಿ ಲೋಕೋಪಯೋಗಿ ಇಲಾಖೆಗೆ ನಕಲಿ ಬಿಲ್ ಹಾಗೂ ಸರಕುಪಟ್ಟಿ (ಇನ್‌ವಾಯ್ಸಿ)ಗಳನ್ನು ಸಲ್ಲಿಸುತ್ತಿದ್ದರೆಂದು ದಿಲ್ಲಿ ಪೊಲೀಸರು ಆಪಾದಿಸಿದ್ದಾರೆ. ಒಳಚರಂಡಿಯೊಂದನ್ನು ನಿರ್ಮಿಸುವ ಗುತ್ತಿಗೆಯನ್ನು ದಿಲ್ಲಿಯ ಪೌರಾಡಳಿತವು ಬನ್ಸಾಲ್‌ಗೆ ನೀಡಿತ್ತು. ಪೌರಾಡಳಿತ ಸಂಸ್ಥೆಗೆ ಬನ್ಸಾಲ್ ನಕಲಿ ಕಂಪೆನಿಗಳ ಹೆಸರಿನಲ್ಲಿ ಬಿಲ್ ನೀಡುತ್ತಿದ್ದರು, ಇದಕ್ಕೆ ಕೇಜ್ರಿವಾಲ್ ನೆರವಾಗುತ್ತಿದ್ದರೆಂದು ‘ರಸ್ತೆ ಭ್ರಷ್ಟಾಚಾರ ವಿರೋಧಿ ಸಂಸ್ಥೆ’ಯು ಆಪಾದಿಸಿದೆ.
ಪೌರ ಕಾರ್ಮಿಕ ಯೋಜನೆಗಳ ಕಣ್ಗಾವಲು ನಡೆಸುವುದಾಗಿ ಹೇಳಿಕೊಳ್ಳುವ ಈ ಎನ್‌ಜಿಓ, ಈಗಾಗಲೇ ಕೇಜ್ರಿವಾಲ್ ಬಾವನ ವಿರುದ್ಧ ನ್ಯಾಯಾಲಯದ ಮೆಟ್ಟಲೇರಿದೆ. ಪೊಲೀಸರಿಗೂ ಅದು ದೂರನ್ನು ಸಲ್ಲಿಸಿದೆ. ಹಗರಣಕ್ಕೆ ಸಂಬಂಧಿಸಿ ಇನ್ನೂ ಹೆಚ್ಚಿನ ದಾಖಲೆಗಳನ್ನು ತನಗೆ ಸಲ್ಲಿಸುವಂತೆ ನ್ಯಾಯಾಲಯವು ಎನ್‌ಜಿಓಗೆ ಸೂಚಿಸಿದೆ. ದಿಲ್ಲಿ ಪೊಲೀಸರು ಕೇಂದ್ರ ಸರಕಾರದ ಅಣತಿಯಂತೆ ಎಎಪಿ ಪಕ್ಷದ ನಾಯಕರನ್ನು ಗುರಿಯಿರಿಸಿ, ದಾಳಿ ಮಾಡುತ್ತಿದ್ದಾರೆಂದು ಕೇಜ್ರಿವಾಲ್ ಹಾಗೂ ಅವರ ಬೆಂಬಲಿಗರು ಆರೋಪಿಸಿದ್ದಾರೆ.