×
Ad

ಕೇಂದ್ರ ಬಜೆಟ್ 2017: ನಿರೀಕ್ಷೆಗಳೇನು?

Update: 2017-01-25 00:20 IST

ಬೆಂಗಳೂರು 2017ನೆ ಸಾಲಿನ ಬಜೆಟನ್ನು ಫೆಬ್ರವರಿ 1ರಂದು ಹಣಕಾಸು ಮಂತ್ರಿ ಅರುಣ್ ಜೇಟ್ಲ್ಲಿಯವರು ಮಂಡಿಸಲಿದ್ದಾರೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೆಯ ಕೆಲಸದ ದಿನ ಮಂಡನೆಯಾಗುವ ಬಜೆಟ್, ಲಾಗಾಯ್ತನಿಂದ ಬಂದ ಸಂಪ್ರದಾಯವನ್ನು ಮುರಿದು ಈ ಬಾರಿ ಒಂದು ತಿಂಗಳ ಮುಂಚಿತವಾಗಿ ಮಂಡನೆಯಾಗುತ್ತಿದೆ. ಇದಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ, ಅಗಿನ ಹಣಕಾಸು ಸಚಿವ ಯಶ್ವಂತ ಸಿನ್ಹಾ ಬಜೆಟ್ ಮಂಡನೆ ಸಮಯವನ್ನು ಸಂಜೆ ಐದರ (ಇಂಗ್ಲಂಡ್‌ನ ಮುಂಜಾನೆ ಹನ್ನೊಂದು ಘಂಟೆ) ಬದಲು ಮುಂಜಾನೆ ಹನ್ನೊಂದಕ್ಕೆ ಮಂಡಿಸುವ ಬದಲಾವಣೆಯನ್ನು ತಂದು, ಈ ನಿಟ್ಟಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಮುದ್ರೆಗೆ ಬೈ ಹೇಳುವ ಕಾರ್ಯಕ್ಕೆ ನಾಂದಿ ಹಾಡಿದ್ದರು. ಈ ಪರಂಪರೆಯನ್ನು ಮಂದುವರಿಸಿದ ಮೋದಿ ಸರಕಾರ, 1924ರಿಂದ ಚಾಲ್ತಿಯಲ್ಲಿದ್ದ, 92 ವರ್ಷದಷ್ಟು ಹಳೆಯದಾದ ಪ್ರತ್ಯೇಕ ರೈಲ್ವೆ ಬಜೆಟ್‌ನ್ನು ಮಂಡಿಸುವ ಸಂಪ್ರದಾಯಕ್ಕೆ ಕೊನೆ ಹಾಡಿದ್ದು, ಈಗ ಎರಡಕ್ಕೂ ಸೇರಿ ಏಕೀಕೃತ ಬಜೆಟನ್ನು ಮಂಡಿಸಲಾಗುತ್ತಿದೆ. ಹಾಗೆಯೇ ನೀತಿ ಆಯೋಗದ ಶಿಫಾರಸಿನಂತೆ ಯೋಜನಾ ಮತ್ತು ಯೋಜನೇತರ ವೆಚ್ಚವನ್ನು ಪ್ರತ್ಯೇಕಿಸುವ ಸಾಧ್ಯತೆ ಕೂಡಾ ಇದೆ.

ಬಜೆಟನ್ನು ಹಿಂದೂಡುವುದರಿಂದ, ಅದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳು ಮಾರ್ಚ್ ಅಂತ್ಯದೊಳಗೆ ಮುಗಿದು, ಜೂನ್1ರ ಬದಲು ಎಪ್ರಿಲ್ ತಿಂಗಳಿನಿಂದ ಅನುಷ್ಠಾನಕ್ಕೆ ಸುಗಮವಾ ಗುತ್ತದೆ ಎನ್ನುವ ಕಾರ್ಯಸೂಚಿ ಈ ಬದಲಾವಣೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಕುಟುಂಬಗಳು, ಕಂಪೆನಿಗಳು ತಮ್ಮ ಉಳಿತಾಯ, ಹೂಡಿಕೆ ಮತ್ತು ತೆರಿಗೆ ಸಂಬಂಧದ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು ಎನ್ನುವ ಆಲೋಚನೆಯೂ ಇದೆ. ಬಜೆಟ್‌ನಲ್ಲಿಯ ಪ್ರಸ್ತಾವನೆಗಳು ಅನುಷ್ಠಾನಗೊಳ್ಳುವುದು ಫೈನಾನ್ಸ್ ಬಿಲ್‌ಗೆ ಸದನದಲ್ಲಿ ಒಪ್ಪಿಗೆ ದೊರೆತ ನಂತರವಾಗಿದ್ದು, ಈ ಪ್ರಕ್ರಿಯೆ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಮುಗಿಯುತ್ತಿದ್ದು, ವೆಚ್ಚ ಮತ್ತು ತೆರಿಗೆ ಪ್ರಸ್ತಾವಗಳು ಹೊಸ ಹಣಕಾಸು ವರ್ಷದ ಆರಂಭದಲ್ಲಿಯೇ ಚಾಲ್ತಿಯಲ್ಲಿ ಬರಬಹುದು.

ಹಣಕಾಸು ವರ್ಷ ಬದಲಾಗಬಹುದೇ?

ಬಜೆಟ್ ಪ್ರಕ್ರಿಯೆಗೆ ಭಾರತದಲ್ಲಿ 150 ವರ್ಷಗಳ ಇತಿಹಾಸ ಇದ್ದು, ಮೊದಲ ಬಜೆಟ್ 1867ರಲ್ಲಿ ಮಂಡನೆಯಾಗಿತ್ತು. ಆಗ ಹಣಕಾಸು ವರ್ಷ ಎಪ್ರಿಲ್‌ನಿಂದ ಮಾರ್ಚ್ ಆಗಿದ್ದು, ಈಗಲೂ ಮುಂದುವರಿದಿದೆ. ಬ್ರಿಟಿಷರ ಪದ್ಧತಿಯಂದ ಹೊರ ಬರುವ ಇನ್ನೊಂದು ಹೆಜ್ಜೆಯಾಗಿ, ಅದು ಜನವರಿ ಯಿಂದ ಡಿಸೆಂಬರ್‌ಗೆ ಬದಲಾಯಿಸುವ (ಕ್ಯಾಲೆಂಡರ್ ವರ್ಷ) ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಕ್ಯಾಲೆಂಡರ್ ವರ್ಷವನ್ನು ಅನುಸರಿಸುತ್ತಿದ್ದು, ಜಾಗತಿಕ ಪ್ಲಾಟ್‌ಫಾರ್ಮ್ ನಲ್ಲಿ ಇರಲು ನಮ್ಮ ದೇಶವೂ ಇದನ್ನು ಅನುಸರಿಸಬೇಕು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸಲಹೆ ನೀಡಲು ಡಾ.ಶಂಕರ ಆಚಾರ್ಯ ನೇತೃತ್ವದಲ್ಲಿ ಜುಲೈ 2016ರಲ್ಲಿ ಸಮಿತಿ ನೇಮಿಸಿದ್ದು. ಈ ಸಮಿತಿ ತನ್ನ ವರದಿಯನ್ನು ನೀಡಬೇಕಾಗಿದೆ. ಈ ಮೊದಲು ಎಲ್.ಕೆ. ಜಾ ಸಮಿತಿಯು 1984ರಲ್ಲಿ ಕ್ಯಾಲೆಂಡರ್ ವರ್ಷವೇ ಹಣಕಾಸು ವರ್ಷ ಇರಲಿ ಎಂದು ಹೇಳಿತ್ತು.

 ಬಜೆಟ್ ತಯಾರಿ ಗೌಪ್ಯವಾಗಿರುತ್ತದೆ. ಸುಮಾರು 200 ಅಧಿಕಾರಿ ಗಳು ಇದರಲ್ಲಿ ಭಾಗಿಯಾಗಿರುತ್ತಿದ್ದು, ಅವರಿಗೆ ಅ ದಿನಗಳಲ್ಲಿ ಹೊರ ಗಿನ ಸಂಪರ್ಕವೇ ಇರುವುದಿಲ್ಲವಂತೆ. ಬಜೆಟ್‌ನಲ್ಲಿ ಪ್ರಸ್ತಾವವಾಗುವ ವಿಷಯಗಳು ಸೋರಿಕೆಯಾದರೆ, ಕೆಲವು ‘ಹಿತಾಸಕ್ತಿಗಳು’ ಅವುಗಳನ್ನು ದುರುಪಯೋಗ ಮಾಡಿಕೊಳ್ಳುವ ಭಯ ಈ ‘ಗೌಪ್ಯತೆ’ಯ ಹಿಂದೆ ಇರುತ್ತದೆ. ಆದರೂ ಬಜೆಟ್‌ನಲ್ಲಿ ಏನಿರಬಹುದು, ಯಾವ ಪ್ರಸ್ತಾಪಗಳು ಇರಬಹುದು ಎನ್ನುವುದರ ಬಗ್ಗೆ ಅರ್ಥಿಕ ತಜ್ಞರು, ವ್ಯವಹಾರಸ್ಥರು, ಉದ್ಯಮಿಗಳೂ, ವ್ಯಾಪಾರೋದ್ಯಮ ಸಂಘಗಳು, ತೆರಿಗೆದಾರರು ಮತ್ತು ಮಾಧ್ಯಮದವರು ಚಿಂತನ-ಮಂಥನ ಮಾಡುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಸಾಕಷ್ಟು ವದಂತಿಗಳು, ಆಶಯಗಳು ಹರಿದಾಡುತ್ತಿವೆ. ಬಜೆಟ್ ಪೂರ್ವ ಸಮಾಲೋಚನೆ, ಮಾಧ್ಯಮದಲ್ಲಿ ವ್ಯಕ್ತವಾದ ಅನಿಸಿಕೆಗಳು ಮತ್ತು ಹಣಕಾಸು ಮಂತ್ರಾಲಯ ಚಿಂತಿಸಿದೆ ಎಂದು ಹೇಳಲಾದ ಪ್ರಸ್ತಾವಗಳ ಪ್ರಕಾರ

*ಆದಾಯ ತೆರಿಗೆ 80ಸಿಸಿ ಸೆಕ್ಷನ್ ಅಡಿಯಲ್ಲಿ ಉಳಿತಾಯಕ್ಕೆ ಇರುವ ತೆರಿಗೆ ವಿನಾಯತಿ ಮಿತಿಯನ್ನು ರೂ. 1,50,000 ರಿಂದ 2,00,000ಕ್ಕೆ ಹೆಚ್ಚಳದ ಸಾಧ್ಯತೆ.
*ಆದಾಯ ತೆರಿಗೆ ವಿನಾಯತಿ ಮಿತಿಯನ್ನು ರೂ. 2,50,000ರಿಂದ 3,00,000 ಅಥವಾ 4,00,000ಕ್ಕೆ ಏರಿಸುವ ಸಾಧ್ಯತೆ.
 * ಸರ್ವರಿಗೂ ತಲೆಗೊಂದು ಸೂರು ಕೊಡುವ ನಿಟ್ಟಿನಲ್ಲಿ ಗೃಹಸಾಲದ ಮೇಲಿನ ಬಡ್ಡಿಗೆ ಇರುವ ತೆರಿಗೆ ವಿನಾಯತಿಯನ್ನು ರೂ. 2,00,000ದಿಂದ 2,500,00ಗೆ ಹೆಚ್ಚಿಸಬಹುದು
*ಎನ್‌ಪಿಎಸ್ ಕಡಿತಕ್ಕೆ ಇರುವ ಮಿತಿಯನ್ನು ರೂ. 50,000ದಿಂದ 1,00,000ಕ್ಕೆ ಹೆಚ್ಚಿಸುವುದು ಅಥವಾ ಸಂಪೂರ್ಣ ಕಡಿತಕ್ಕೆ ತೆರಿಗೆ ವಿನಾಯತಿ ಕೊಡಬಹುದು.
  *ಬ್ಯಾಂಕ್ ಬಡ್ಡಿ ಆದಾಯಕ್ಕೆ ಇರುವ ಟಿಡಿಎಸ್ ಮಿತಿಯನ್ನು ರೂ. 10,000ದಿಂದ 20,000ಕ್ಕೆ ಹೆಚ್ಚಿಸುವುದು ಅಥವಾ ಟಿಡಿಎಸ್ ರೇಟನ್ನು ಕಡಿಮೆ ಮಾಡಬಹುದು.

ಇವುಗಳು ಕೇವಲ ವದಂತಿಗಳು ಅಥವಾ ಆಶಯಗಳಿರಬಹುದು. ಆದರೆ, ಬದಲಾದ ರಾಜಕೀಯ ಮತ್ತು ಹಣಕಾಸು ಪರಿಸ್ಥಿತಿಯಲ್ಲಿ ವಾಸ್ತವಕ್ಕೆ ಸಮೀಪ ಇದ್ದಂತೆ ಕಾಣುತ್ತದೆ. ಕಳೆದ ಎರಡು-ಮೂರು ವರ್ಷಗಳಿಂದ ಆದಾಯ-ಕರ ವಿಷಯದಲ್ಲಿ ಮಧ್ಯಮವರ್ಗಕ್ಕೆ ಸರಕಾರ ಏನೂ ಕೊಡಲಿಲ್ಲವೆಂದು ಅಕ್ರೋಶ ವ್ಯಕ್ತ ಮಾಡುತ್ತಿದ್ದು, ಅವರ ಆಶಯಗಳಿಗೆ ಸ್ಪಂದನೆಯ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಹಾಗೆಯೇ, ನೋಟು ರದ್ದತಿ ಮತ್ತು ನಂತರ ಸರಕಾರ ತೆಗೆದು ಕೊಂಡ ಕೆಲವು ನಿರ್ಧಾರಗಳು, ಸರಕಾರದ ವರ್ಚಸ್ಸನ್ನು ಕುಂಠಿತಗೊಳಿಸಿದ್ದು, ಸರಕಾರಕ್ಕೆ ಅದನ್ನು ಉಳಿಸಿಕೊಳ್ಳುವ ಮತ್ತು ವೃದ್ಧ್ದಿಗೊಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇದಕ್ಕೂ ಮಿಗಿಲಾಗಿ ಸರಕಾರಕ್ಕೆ ಪಂಚರಾಜ್ಯಗಳಲ್ಲಿ ನಡೆಯವ ಚುನಾವಣೆ ‘ಮಾಡು ಇಲ್ಲವೇ ಮಡಿ’ಯಾಗಿದ್ದು, ನರೇಂದ್ರ ಮೋದಿಯವರ ಭವಿಷ್ಯ ಅದರಲ್ಲಿ ಅಡಗಿದ್ದು, ಜನಸ್ನೇಹಿ ಬಜೆಟ್ ಮಂಡಿಸಿ ಮತದಾರರನ್ನು ಒಲಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Writer - ರಮಾನಂದ ಶರ್ಮಾ,

contributor

Editor - ರಮಾನಂದ ಶರ್ಮಾ,

contributor

Similar News