ಪ್ರಶಸ್ತಿಗಳು...ಸಮ್ಮಾನಗಳು...
ಮಾನ್ಯರೆ,
ಪ್ರತೀ ವರ್ಷ ಗಣರಾಜ್ಯೋತ್ಸವ ಬರುವಾಗ ಸರಕಾರ ಪದ್ಮ ಪ್ರಶಸ್ತಿಗಳನ್ನು ನೀಡಲು ಸಾಧಕರ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಈ ಪಟ್ಟಿಯಲ್ಲಿ ಸ್ಥಾನಗಳಿಸಲು ಲಾಬಿಯೇ ನಡೆಯುತ್ತದೆ. ಈ ಲಾಬಿಯಿಂದಾಗಿ ಅನರ್ಹರೂ ಪ್ರಶಸ್ತಿ ಪಡೆಯುವಂತಾಗುತ್ತದೆ ಎಂಬ ಅಭಿಪ್ರಾಯವಿದೆ. ಹಾಗಾಗಿ ಲಾಬಿ ನಡೆಸುವುದೂ ಒಂದು ಉದ್ಯಮವಾಗಿ ಹೋಗಿವೆ ಎಂಬ ಖ್ಯಾತ ಅಂಕಣಕಾರರ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಸರಕಾರ ನೀಡುವ ಎಲ್ಲಾ ತರದ ಪ್ರಶಸ್ತಿಗಳಿಗೂ ಈ ಮಾತು ಅನ್ವಯವಾಗುತ್ತದೆ. ಕೇಂದ್ರ ಸರಕಾರದ ಮಾಜಿ ಮಂತ್ರಿಗಳಾದ ಜೈರಾಮ್ ರಮೇಶ್ ಅವರು ತಮ್ಮದೊಂದು ಲೇಖನದಲ್ಲಿ ಪ್ರಶಸ್ತಿ ಕುರಿತಾದ ಒಂದು ಮಾತನ್ನು ಉಲ್ಲೇಖಿಸಿದ್ದರು. 1970 ದಶಕದಲ್ಲಿ ಸರಕಾರದ ಎಲ್ಲ ಯಶಸ್ವೀ ನಿರ್ಧಾರಗಳ ಹಿಂದೆ ಆಗಿನ ಐಎಎಸ್ ಅಧಿಕಾರಿ ಪಿ.ಎಸ್ ಹಕ್ಸರವರ ಪ್ರಮುಖ ಪಾತ್ರವಿತ್ತು. ಈ ಸೇವೆಯಲ್ಲಿ ಅವರ ಹೆಸರು ಪದ್ಮ ಪ್ರಶಸ್ತಿಗಾಗಿ ಪರಿಗಣಿಸಲ್ಪಟ್ಟಾಗ ಆ ಪ್ರಶಸ್ತಿಯನ್ನು ಅವರು ನಿರಾಕರಿಸಿದ್ದರು. ಸರಕಾರಿ ಸೇವೆ ಮಾಡಿದ್ದಕ್ಕಾಗಿ ಸರಕಾರದಿಂದ ತಾನು ಸಂಬಳ ಪಡೆದು ಕೊಂಡಿರುವ ಕಾರಣ ಹೀಗೆ ಸರಕಾರದ ಪ್ರಶಸ್ತಿ ಪಡೆಯುವುದು ತನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು ಎಂದು ಪ್ರಶಸ್ತಿ ನಿರಾಕರಣೆಯ ಹಿಂದಿನ ಉದ್ದೇಶವನ್ನು ಅವರು ವಿವರಿಸಿದ್ದರು. ಇದೀಗ ಉಡುಪಿಯ ಚಿಂತಕ ಜಿ. ರಾಜಶೇಖರ ಅವರೂ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ನಿರಾಕರಿಸಿದ್ದು ಹೆಚ್ಚಿನವರಿಗೆ ಅಚ್ಚರಿಮೂಡಿಸಿದರೂ ಸಮಾನಮನಸ್ಕರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದ ಇತರ ಅಕಾಡಮಿಗಳಂತೆ ಕೊಂಕಣಿ ಆಕಾಡಮಿ ಕೂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ವಿವಧ ಕ್ಷೇತ್ರಗಳ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ಬರುವ ಫೆಬ್ರವರಿಯಲ್ಲಿ ನಡೆಸಲು ಹಮ್ಮಿಕೊಂಡ ಕಲೋತ್ಸವ ಒಂದು ಉತ್ತೇಜಕ ಕಾರ್ಯಕ್ರಮವೆನ್ನಬೇಕು. ಇದೀಗ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಗಳನ್ನು ಘೋಷಿಸಿದ್ದು ಇವುಗಳಲ್ಲಿ ಸ್ವರಚಿತ ಸಣ್ಣ ಕತೆಗಳ ಸಂಕಲನ ಸ್ಥಾನ ಪಡೆಯದಿರುವುದು ಅಚ್ಚರಿ ಮೂಡಿಸುತ್ತದೆ.