ಈ ಜಿಲ್ಲೆಯಲ್ಲಿ ಶೌಚಾಲಯ ಇದ್ದರಷ್ಟೇ ಪಡಿತರ!
ಭೋಪಾಲ್, ಜ.25: ಬಯಲು ಶೌಚವನ್ನು ತಡೆಯುವ ಗುರಿಯನ್ನು ಆದಷ್ಟು ಕ್ಷಿಪ್ರವಾಗಿ ಸಾಧಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶದ ಶೋರಪುರ ಜಿಲ್ಲೆ ವಿಶಿಷ್ಟ ನಿಯಮಾವಳಿ ರೂಪಿಸಿದೆ. ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರು ಪಡಿತರ ಪಡೆಯಬೇಕಿದ್ದರೆ ಮನೆಯಲ್ಲಿ ಶೌಚಾಲಯ ಇದೆ ಎಂಬ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.
ಇಂಥ ಪ್ರಮಾಣಪತ್ರವನ್ನು ಸಲ್ಲಿಸಿದ ಮಂದಿಗಷ್ಟೇ ಪಡಿತರ ನೀಡುವಂತೆ ಎಲ್ಲ ಪಡಿತರ ಚೀಟಿ ಅಂಗಡಿಗಳಿಗೆ ಸೂಚಿಸಲಾಗಿದೆ. ಈ ತಂತ್ರ ಫಲ ನೀಡಿದೆ. ಕೆಲ ಮನೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಮನೆಗಳಿಗೂ ಇದೀಗ ಶೌಚಾಲಯಗಳಿವೆ ಎಂದು ಜಿಲ್ಲಾಧಿಕಾರಿ ಅಭಿಜಿತ್ ಅಗರ್‌ವಾಲ್ ತಿಳಿಸಿದ್ದಾರೆ.
ಜಿಲ್ಲೆ ಜನಪದ ಪಂಚಾಯಿತಿ ವ್ಯಾಪ್ತಿಯ ಅಲಪುರ ಗ್ರಾಮದಲ್ಲಿ ಈ ಆಂದೋಲನ ಆರಂಭವಾಗಿತ್ತು. ಜಿಲ್ಲಾಧಿಕಾರಿ ಕಳೆದ ಡಿಸೆಂಬರ್ 30ರಂದು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಕಡ್ಡಾಯಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಗ್ರಾಮದ ಕೆಲವು ಮಂದಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಂಥ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ವಿವರಿಸಿದರು.
ಜಿಲ್ಲೆಯ 225 ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ 587 ಗ್ರಾಮಗಳನ್ನು ಜನವರಿ 26ರಂದು ಬಯಲುಶೌಚ ಮುಕ್ತ ಗ್ರಾಮಗಳೆಂದು ಘೋಷಿಸಲು ಉದ್ದೇಶಿಸಲಾಗಿದೆ. ಈ ಕ್ರಮಕ್ಕೆ ಯಾವ ಗ್ರಾಮಸ್ಥರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಸ್ಥಳೀಯ ಶಾಸಕ ಹಾಗೂ ಮುಖಂಡ ರಾಮನಿವಾಸ್ ರಾವತ್ ಮಾತ್ರ ಈ ನಿರ್ಧಾರವನ್ನು ಟೀಕಿಸಿದ್ದಾರೆ.