ಟ್ರಂಪ್ ಮೇಲೆ ದಾಳಿಯಾದರೆ ರಕ್ಷಿಸುವುದಿಲ್ಲ ಎಂದ ಸೀಕ್ರೆಟ್ ಸರ್ವಿಸ್ ಏಜೆಂಟ್ !
ವಾಷಿಂಗ್ಟನ್, ಜ.25: ಅಮೆರಿಕಾದ ಸೀಕ್ರೆಟ್ ಸರ್ವಿಸ್ ಏಜೆಂಟ್ ಮಹಿಳೆಯೊಬ್ಬರು ತಾನು ಟ್ರಂಪ್ ಮೇಲೆಯಾರಾದರೂ ಗುಂಡಿಕ್ಕಲು ಯತ್ನಿಸಿದರೆ ಅಧ್ಯಕ್ಷರನ್ನು ರಕ್ಷಿಸುವುದಿಲ್ಲ ಎಂದು ಹೇಳಿ ಮಾಡಿರುವ ಫೇಸ್ ಬುಕ್ ಪೋಸ್ಟ್ ಒಂದನ್ನು ಸೀಕ್ರೆಟ್ ಸರ್ವಿಸ್ ಏಜೆನ್ಸಿ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಸಿಎಸ್‌ಎ ಇದರ ಡೆನ್ವರ್ ಫೀಲ್ಡ್ ಕಚೇರಿಯಲ್ಲಿ ಸೀನಿಯರ್ ಏಜೆಂಟ್ ಆಗಿರುವ ಕೆರ್ರಿ ಓ ಗ್ರಾಡಿ, ಇದೀಗ ಡಿಲೀಟ್ ಮಾಡಲ್ಪಟ್ಟಿರುವ ಅವರ ಹಲವು ಫೇಸ್ ಬುಕ್ ಪೋಸ್ಟ್ ಗಳಲ್ಲಿ ತಾವು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಡೆಮಾಕ್ರೆಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಬೆಂಬಲಿಸಿದ್ದಾಗಿ ತನ್ನಂತಹ ಏಜೆಂಟರು ತಮ್ಮ ರಾಜಕೀಯ ನಿಷ್ಠೆಗಳ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ನಿಯಂತ್ರಿಸುವ ಕಾನೂನುಗಳನ್ನು ತಾನು ಗೌರವಿಸುವುದಿಲ್ಲ ಎಂದಿದ್ದರು.
ಈ ಪೋಸ್ಟ್ ಗಳ ಬಗ್ಗೆ ದಿ ವಾಷಿಂಗ್ಟನ್ ಎಕ್ಸಾಮಿನರ್ ಮಂಗಳವಾರವರದಿ ಮಾಡುತ್ತಿದ್ದಂತೆಯೇ ಕೆರ್ರಿ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದರು.
‘‘ಕಳೆದ 23 ವರ್ಷಗಳಲ್ಲಿ ಸರಕಾರಿ ಸೇವಕಿಯಾಗಿ ನಾನು ಹ್ಯಾಚ್ ಕಾಯ್ದೆಯನ್ನು ಉಲ್ಲಂಘಿಸದೇ ಇರಲು ಶ್ರಮಿಸಿದ್ದೇನೆ.ಆದರೆ ಈ ಜಗತ್ತು ಬದಲಾಗಿದೆ ಹಾಗೂ ನಾನೂ ಬದಲಾಗಿದ್ದೇನೆ.ದೇಶಕ್ಕೆ ಇಲ್ಲಿನ ಮಹಿಳೆಯರಿಗೆ ಹಾಗೂ ಅಲ್ಪಸಂಖ್ಯಾತರಿಗೆ ವಿನಾಶಕಾರಿ ಎಂದು ತಿಳಿದಿರುವಂತಹ ಒಂದು ವಿಚಾರದಲ್ಲಿ ಬುಲೆಟ್ ಬದಲು ನಾನು ಜೈಲು ಶಿಕ್ಷೆ ಅನುಭವಿಸಲು ಸಿದ್ಧಳಾಗಿದ್ದೇನೆ. ಹ್ಯಾಚ್ ಕಾಯ್ದೆ ಬಗ್ಗೆ ನನಗೆ ಚಿಂತೆಯಿಲ್ಲ. ನಾನು ಆಕೆಯ ಪರವಾಗಿದ್ದೇನೆ,’’ ಎಂದು ಕೆರ್ರಿ ಪೋಸ್ಟ್ ಮಾಡಿದ್ದರು.
ಸೀಕ್ರೆಟ್ ಸರ್ವಿಸ್ ಕೆರ್ರಿಯ ಪೋಸ್ಟ್ ಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆಯಾದರೂ ಈ ಪ್ರಕರಣದ ಬಗ್ಗೆ ತನಗೆ ಅರಿವಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.