ಚುನಾವಣೆಯಲ್ಲಿ ಲಕ್ಷಾಂತರ ಜನರಿಂದ ಅಕ್ರಮ ಮತದಾನ :ಈಗಲೂ ನಂಬಿರುವ ಟ್ರಂಪ್
ವಾಶಿಂಗ್ಟನ್, ಜ. 25: ಕಳೆದ ವರ್ಷದ ನವೆಂಬರ್‌ನಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಲಕ್ಷಾಂತರ ಜನರು ಅಕ್ರಮವಾಗಿ ಮತ ಚಲಾಯಿಸಿದ್ದಾರೆ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾವಿಸಿದ್ದಾರೆ ಎಂದು ಶ್ವೇತಭವನ ಮಂಗಳವಾರ ಖಚಿತಪಡಿಸಿದೆ. ಆದರೆ, ಅದನ್ನು ಸಾಬೀತುಪಡಿಸುವ ಪುರಾವೆಯನ್ನು ನೀಡಲು ಅದು ನಿರಾಕರಿಸಿದೆ.
ಸುಮಾರು 50 ಲಕ್ಷ ಜನರು ಅಕ್ರಮವಾಗಿ ಮತ ಚಲಾಯಿಸಿರಬಹುದು ಎಂಬುದಾಗಿ ಟ್ರಂಪ್ ಕಾಂಗ್ರೆಸ್ ನಾಯಕರಿಗೆ ಹೇಳಿದ ಗಂಟೆಗಳ ಬಳಿಕ, ಅವರು ಆ ರೀತಿ ಹೇಳಿರುವುದನ್ನು ಶ್ವೇತಭವನದ ವಕ್ತಾರ ಸಿಯನ್ ಸ್ಪೈಸರ್ ಖಚಿತಪಡಿಸಿದರು.
‘‘ಅಧ್ಯಯನಗಳ ಆಧಾರದಲ್ಲಿ 30ರಿಂದ 50 ಲಕ್ಷ ಮಂದಿ ಅಕ್ರಮವಾಗಿ ಮತ ಚಲಾಯಿಸಿರಬಹುದೆಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ’’ ಎಂದರು.
ಆದಾಗ್ಯೂ, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಕ್ರಮ ಮತಗಳ ಚಲಾವಣೆಯಾಗಿದೆ ಎಂಬುದನ್ನು ತೋರಿಸುವ ಪುರಾವೆಗಳು ಸಾರ್ವಜನಿಕವಾಗಿ ಲಭ್ಯವಾಗಿಲ್ಲ.
ಸಾಬೀತಾದರೆ, ಅದು ಅಮೆರಿಕ ಇತಿಹಾಸದ ಅತಿ ದೊಡ್ಡ ರಾಜಕೀಯ ಹಗರಣಗಳ ಗುಂಪಿಗೆ ಸೇರುತ್ತದೆ ಹಾಗೂ ಅಮೆರಿಕದ ಪ್ರಜಾಸತ್ತೆಯ ಮೇಲಿನ ಜನರ ನಂಬಿಕೆಯನ್ನು ಬುಡಮೇಲು ಮಾಡಬಹುದಾಗಿದೆ.