ಪಶ್ಚಿಮ ದಂಡೆಯಲ್ಲಿ 2,500 ಮನೆ ನಿರ್ಮಾಣ
ಜೆರುಸಲೇಂ/ರಮಲ್ಲಾ, ಜ. 25: ಆಕ್ರಮಿತ ಪಶ್ಚಿಮ ದಂಡೆಯಲ್ಲಿ 2,500 ಮನೆಗಳನ್ನು ನಿರ್ಮಿಸುವ ಯೋಜನೆಗೆ ಇಸ್ರೇಲ್ ಮಂಗಳವಾರ ಅನುಮೋದನೆ ನೀಡಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಇಂಥ ಮನೆಗಳನ್ನು ನಿರ್ಮಿಸುವ ಯೋಜನೆಯ ವಿಸ್ತರಣೆಗೆ ಅದು ಈ ಮೂಲಕ ಚಾಲನೆ ನೀಡಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಅವಿಗ್ಡರ್ ಲಿಬರ್‌ಮನ್ ಯೋಜನೆಗೆ ಅಂಗೀಕಾರ ನೀಡಿದ್ದು, ಮನೆ ನಿರ್ಮಾಣ ಯೋಜನೆಗೆ ಸಂಬಂಧಿಸಿ ಇಸ್ರೇಲ್‌ನ ಇತ್ತೀಚಿನ ಅತಿ ದೊಡ್ಡ ಘೋಷಣೆಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಫೆಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್‌ನ ಮಹಾ ಕಾರ್ಯದರ್ಶಿ ಸಯೀದ್ ಇರಾಕತ್, ‘‘ಅಂತಾರಾಷ್ಟ್ರೀಯ ಸಮುದಾಯವು ತಕ್ಷಣ ಇಸ್ರೇಲ್‌ನ ಕೃತ್ಯಗಳಿಗೆ ಅದನ್ನು ಉತ್ತರದಾಯಿಯನ್ನಾಗಿಸಬೇಕು’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೀತಿಗಳಿಂದ ಇಸ್ರೇಲ್‌ಗೆ ಧೈರ್ಯ ಬಂದಿದೆ ಎಂದು ಅವರು ನುಡಿದರು.
ಹೆಚ್ಚಿನ ಮನೆಗಳು ಪಶ್ಚಿಮ ದಂಡೆಯ ಬೃಹತ್ ವಾಸ್ತವ್ಯ ಬಡಾವಣೆಗಳೊಳಗೆ ಬರುತ್ತವೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮನೆ ನಿರ್ಮಾಣ ಯೋಜನೆಗೆ ಅಂಗೀಕಾರ ನೀಡಿರುವ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ನೀಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, ‘‘ನಾವು ಮನೆಗಳನ್ನು ನಿರ್ಮಿಸುತ್ತಿದ್ದೇವೆ ಹಾಗೂ ಮನೆಗಳ ನಿರ್ಮಾಣವನ್ನು ಮುಂದುವರಿಸುತ್ತೇವೆ’’ ಎಂದರು.
ಇಸ್ರೇಲ್‌ಗೆ ಪ್ರಬಲ ಬೆಂಬಲ ನೀಡುವ ಸೂಚನೆಯನ್ನು ಟ್ರಂಪ್ ಈಗಾಗಲೇ ನೀಡಿದ್ದಾರೆ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಮುಂದಾಗಿರುವ ಇಸ್ರೇಲ್‌ನ ಬಲಪಂಥೀಯ ರಾಜಕಾರಣಿಗಳು, ಫೆಲೆಸ್ತೀನ್ ದೇಶದ ಕಲ್ಪನೆಯನ್ನೇ ಕೊನೆಗೊಳಿಸಬೇಕೆಂದು ಕರೆ ನೀಡಿದ್ದಾರೆ.
ಎರಡು ದೇಶಗಳ ಪರಿಹಾರಕ್ಕೆ ತಾನು ಈಗಲೂ ಅಂಟಿಕೊಂಡಿರುವುದಾಗಿ ನೆತನ್ಯಾಹು ಹೇಳಿದ್ದಾರೆ. ಆದರೆ, ಪೂರ್ವ ಜೆರುಸಲೇಮ್‌ನಲ್ಲಿ ಮನೆಗಳನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ರವಿವಾರ ತನ್ನ ಸಚಿವರಿಗೆ ಹೇಳಿದ್ದಾರೆನ್ನಲಾಗಿದೆ.