ಶೀಘ್ರ ಉತ್ತರಿಸಲು ಕೇಂದ್ರ ಸರಕಾರಕ್ಕೆ ಸೂಚನೆ
ಹೊಸದಿಲ್ಲಿ, ಜ.25: ರಾಜ್ಯ ಸರಕಾರದ ಅಧೀನ ಸಂಸ್ಥೆ ಸೆಂಟ್ರಲ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್)ನಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಮತ್ತು ಆಡಳಿತಾತ್ಮಕ ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂಬ ಅರ್ಜಿಯ ವಿಷಯದಲ್ಲಿ ತಕ್ಷಣ ಪ್ರತಿಕ್ರಿಯೆ ನೀಡಬೇಕೆಂದು ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರ ಮತ್ತು ಕೇಂದ್ರೀಯ ಜಾಗೃತಿ ಆಯೋಗ (ಸಿವಿಸಿ)ಕ್ಕೆ ನಿರ್ದೇಶನ ನೀಡಿದೆ. ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿ ಕೇಂದ್ರ ಸರಕಾರ ಮತ್ತು ಸಿವಿಸಿಗೆ ಮುಖ್ಯ ನ್ಯಾಯಾಧೀಶೆ ಜಿ.ರೋಹಿಣಿ ಮತ್ತು ನ್ಯಾಯಾಧೀಶ ಧಿಂಗ್ರ ಸೆಹಗಲ್ ಅವನ್ನೊಳಗೊಂಡ ಪೀಠವೊಂದು ನೋಟಿಸ್ ಜಾರಿಗೊಳಿಸಿತು ಮತ್ತು ವಿಚಾರಣೆಯನ್ನು ಮೇ 3ಕ್ಕೆ ನಿಗದಿಗೊಳಿಸಿತು. 1974ರಲ್ಲಿ ಸ್ಥಾಪಿಸಲಾದ ಸಿವಿಸಿಯಲ್ಲಿ ನಡೆದಿರುವ ಆರ್ಥಿಕ ಮತ್ತು ಆಡಳಿತಾತ್ಮಕ ಅವ್ಯವಹಾರದ ಕಾರಣ ಸರಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದ್ದು ಈ ಕುರಿತು ಕೋರ್ಟಿನ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರಕಾರಕ್ಕೆ ಮತ್ತು ಸಿವಿಸಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮದನ್‌ಜಿತ್ ಕುಮಾರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಸಮಿತಿ ರಚಿಸಲು ತಾನು ಸರಕಾರಕ್ಕೆ ಮತ್ತು ಸಿವಿಸಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ಅವ್ಯವಸ್ಥಿತ ಮತ್ತು ಅಕ್ರಮವಾಗಿ ನೇಮಿಸಿದ ಕಾರಣ ಸಿಇಎಲ್‌ಗೆ ಭಾರೀ ನಷ್ಟವಾಗಿದೆ ಎಂದು ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದರು.