ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿದ ಎನ್‌ಎಸ್‌ಜಿ
ಹೊಸದಿಲ್ಲಿ,ಜ.26: ದೇಶದ ಮಿಲಿಟರಿ ಶಕ್ತಿ, ಅದರ ಅತ್ಯಾಧುನಿಕ ರಕ್ಷಣಾ ವೇದಿಕೆಗಳು ಮತ್ತು ವೈವಿಧ್ಯಪೂರ್ಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಪ್ರದಾಯಗಳು ಇಲ್ಲಿನ ರಾಜ್‌ಪಥ್‌ನಲ್ಲಿ ಇಂದು ನಡೆದ 68ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನಾವರಣ ಗೊಂಡವು. ಸಂಪ್ರದಾಯದಂತೆ ಗಣರಾಜ್ಯೋತ್ಸವ ಪರೇಡ್ ಇಂಡಿಯಾ ಗೇಟ್‌ನ ಅಮರ್ ಜವಾನ್ ಜ್ಯೋತಿಯ ಬಳಿಯಿಂದ ಆರಂಭಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪರವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನಿರಿಸುವ ಮೂಲಕ ಗೌರವಾರ್ಪಣೆ ಮಾಡಿದರು.
ಪ್ರಧಾನಿ ಮತ್ತು ರಾಷ್ಟ್ರಪತಿಗಳ ವಾಹನಗಳ ಸಾಲು ರಾಜಪಥವನ್ನು ತಲುಪಿದ ಬಳಿಕ ರಾಷ್ಟ್ರಧ್ವಜಾರೋಹಣ ನಡೆದು, 21 ಕುಶಾಲು ತೋಪುಗಳ ವಂದನೆಯೊಂದಿಗೆ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ನಂತರ ಪರೇಡ್ ಆರಂಭಗೊಂಡು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗೌರವ ವಂದನೆಯನ್ನು ಸ್ವೀಕರಿಸಿದರು.
ದೇಶದ ಅತ್ಯುತ್ಕೃಷ್ಟ ಭಯೋತ್ಪಾದನೆ ನಿಗ್ರಹ ಪಡೆ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್‌ಸ್‌ಜಿ)ನ ‘ಬ್ಲಾಕ್ ಕ್ಯಾಟ್’ ಕಮಾಂಡೋಗಳು ಇದೇ ಮೊದಲ ಬಾರಿಗೆ ಹೆಜ್ಜೆಗಳನ್ನು ಹಾಕಿದರು.
ಕಪ್ಪು ಸಮವಸ್ತ್ರ, ಭಾಗಶಃ ಮುಖವನ್ನು ಮುಚ್ಚುವ ಶಿರಸ್ತ್ರಾಣ ಧರಿಸಿ,ಸ್ಪೆಷಲ್ ಅಸಾಲ್ಟ್ ರೈಫಲ್ ಎಂಪಿ-5ಅನ್ನು ಹಿಡಿದಿದ್ದ ಸುಮಾರು 140 ಯೋಧರಿದ್ದ ಬ್ಲಾಕ್ ಕ್ಯಾಟ್ ತಂಡ ಪರೇಡ್‌ಗೆ ವಿಶೇಷ ಕಳೆಯನ್ನು ನೀಡಿತ್ತು.
ಖ್ಯಾತ ಕವಿ ಜಾವೇದ್ ಅಖ್ತರ್ ವಿರಚಿತ ಎನ್‌ಎಸ್‌ಜಿಯ ಗೀತೆ ‘ಹಮ್ ಹೈನಾ ಹೈನಾ ಹಿಂದುಸ್ಥಾನ್ ’ಹಾಡುತ್ತ ಬ್ಲಾಕ್ ಕ್ಯಾಟ್‌ಗಳು ರಾಜ್‌ಪಥ್‌ನಲ್ಲಿ ಹೆಜ್ಜೆ ಹಾಕುತ್ತಿದ್ದರೆ ವೀಕ್ಷಕರ ಮೆಚ್ಚಿಗೆಯ ಕರತಾಡನಗಳು ನಿರಂತರ ಹರಿದು ಬರುತ್ತಲೇ ಇದ್ದವು.
ಎನ್‌ಎಸ್‌ಜಿ ಪ್ರದರ್ಶಿಸಿದ ವಿಶೇಷವಾಗಿ ರೂಪಿಸಲಾಗಿರುವ ಹೈಜಾಕ್ ಮಧ್ಯಪ್ರವೇಶ ವಾಹನ ‘ಶೆರ್ಪಾ’ ಮತ್ತು ಹೈಜಾಕ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಬಳಸುವ ಎರಡು ಜಿಪ್ಸಿಗಳು ಗಮನ ಸೆಳೆದವು.
ಭಾರತೀಯ ಸೇನೆ ಮತ್ತು ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಂದ ಅತ್ಯುತ್ತಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಆಯ್ದುಕೊಳ್ಳುವ ಎನ್‌ಎಸ್‌ಜಿಯನ್ನು 1984ರಲ್ಲಿ ಸ್ಥಾಪಿಸಲಾಗಿತ್ತು.
ಸಾಟಿಯಿಲ್ಲದ ಅರ್ಪಣಾ ಮನೋಭಾವ ಮತ್ತು ಕಠಿಣ ತರಬೇತಿಯ ಬುನಾದಿಯನ್ನು ಹೊಂದಿರುವ ಎನ್‌ಎಸ್‌ಜಿ ಅದರಿಂದಾಗಿಯೇ ಅತ್ಯಂತ ಅಲ್ಪಸಮಯದಲ್ಲಿಯೇ ದೇಶಾದ್ಯಂತ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ಧಾವಿಸುವ ಸಾಮರ್ಥ್ಯ ಹೊಂದಿದೆ. ಇದು ದೇಶದ ಏಕಮಾತ್ರ ಹೈಜಾಕ್ ನಿಗ್ರಹ ಪಡೆಯೂ ಆಗಿದೆ.
ಯುಎಇಯ ಯೋಧರ ತುಕುಡಿಯೊಂದು ಸಹ ಇದೇ ಮೊದಲ ಬಾರಿಗೆ ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿತ್ತು. 35 ಸಂಗೀತಗಾರರಿದ್ದ ಯುಎಇ ಬ್ಯಾಂಡ್‌ನ್ನು ಮುಂದಿಟ್ಟುಕೊಂಡು ಸಾಗಿದ 149 ಸದಸ್ಯರ ಪ್ರೆಸಿಡೆನ್ಶಿಯಲ್ ಗಾರ್ಡ್ ರಾಷ್ಟ್ರಪತಿ ಮುಖರ್ಜಿಯವರಿಗೆ ಸಾಂಪ್ರದಾಯಿಕ ವಂದನೆಯನ್ನು ಸಲ್ಲಿಸಿತು.