×
Ad

ಫ್ಲೋರಿಡಾದಲ್ಲಿ ಹೆಬ್ಬಾವುಗಳ ಹಾವಳಿ ತಡೆಯಲು ತಮಿಳುನಾಡಿನ ಇರುಳರ ನೆರವು

Update: 2017-01-27 14:31 IST

ವಾಷಿಂಗ್‌ಟನ್,ಜ.27: ಫ್ಲೋರಿಡಾದಲ್ಲಿ ಸಣ್ಣ ಸಸ್ತನಿಗಳನ್ನು ತಿಂದು ಮುಗಿಸುತ್ತಿರುವ, ಕೆಲವು ಸಸ್ತನಿಗಳ ಸಂಕುಲಗಳನ್ನು ವಿನಾಶದ ಅಂಚಿಗೆ ತಳ್ಳಿರುವ ಬರ್ಮೀಸ್ ಹೆಬ್ಬಾವುಗಳ ಹಾವಳಿಯಿಂದ ಪಾರಾಗಲು ತಮಿಳುನಾಡಿನ ಇರುಳ ಸಮುದಾಯಕ್ಕೆ ಸೇರಿದ ಇಬ್ಬರು ಹಾವು ಹಿಡಿಯುವವರನ್ನು ಫ್ಲೋರಿಡಾ ವನ್ಯಜೀವಿ ಅಧಿಕಾರಿಗಳು ಕರೆಸಿಕೊಂಡಿದ್ದಾರೆ. ಅವರೊಂದಿಗೆ ಇಬ್ಬರು ಭಾಷಾಂತರಕಾರರೂ ಬಂದಿದ್ದು, ಈ ನಾಲ್ವರೂ ಫೆಬ್ರವರಿ ಅಂತ್ಯದವರೆಗೆ ಇಲ್ಲಿಯೇ ಇರಲಿದ್ದಾರೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗವು ಅವರ ಸೇವೆಗೆ 68,888 ಡಾ.(ಸುಮಾರು 46.94 ಲ.ರೂ.)ಗಳನ್ನು ಪಾವತಿಸಿದೆ. ಜೊತೆಗೆ ಅವರನ್ನು ತನ್ನದೇ ಖರ್ಚಿನಲ್ಲಿ ಅಮೆರಿಕಕ್ಕೆ ಕರೆಸಿಕೊಂಡಿದೆ.

 ಈ ತಿಂಗಳ ಆರಂಭದಲ್ಲಿ ಫ್ಲೋರಿಡಾಕ್ಕೆ ಬಂದಿಳಿದಿರುವ ಇರುಳ ಬುಡಕಟ್ಟು ಜನಾಂಗಕ್ಕೆ ಸೇರಿದ, 50ವರ್ಷ ವಯಸ್ಸಿನ ಮಸಿ ಸದೈಯಾಂ ಮತ್ತು ವೈದಿವೇಲ್ ಗೋಪಾಲ್ ಕೆಲಸವನ್ನಾರಂಭಿಸಿದ ಮೊದಲ ಎಂಟು ದಿನಗಳಲ್ಲಿಯೇ 16 ಅಡಿ ಉದ್ದದ ಹೆಣ್ಣು ಹೆಬ್ಬಾವು ಸೇರಿದಂತೆ 13 ಹೆಬ್ಬಾವುಗಳನ್ನು ಹಿಡಿದು ಅಧಿಕಾರಿಗಳನ್ನು ದಂಗು ಬಡಿಸಿದ್ದಾರೆ.

ತಮ್ಮ ತಾಯ್ನಡಿನಲ್ಲಿ ಹಾವುಗಳನ್ನು ಹಿಡಿಯುವಲ್ಲಿ ಇರುಳರು ಪ್ರಸಿದ್ಧರಾಗಿದ್ದಾರೆ. ಹಾವು ಹಿಡಿಯುವುದು ಅವರ ಕುಲಕಸುಬೇ ಆಗಿದೆ. ಹೀಗಾಗಿ ಅವರು ಫ್ಲೋರಿಡಾ ದಲ್ಲಿಯ ಕೆಲವರಿಗೆ ಹಾವುಗಳನ್ನು ಹಿಡಿಯುವ ಕೆಲವು ತಂತ್ರಗಳನ್ನು ಕಲಿಸುತ್ತಾರೆ ಎಂದು ನಾವು ಆಶಿಸಿದ್ದೇವೆ ಎಂದು ಆಯೋಗದ ಅಧಿಕಾರಿ ಕ್ರಿಸ್ಟನ್ ಸಾಮರ್ಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News