×
Ad

ಮುಸ್ಲಿಮರಿಗೆ ವೀಸಾ ನಿಷೇಧ ಪ್ರತಿಭಟಿಸಿ ಇರಾನ್ ನಟಿಯಿಂದ ಆಸ್ಕರ್ ಬಹಿಷ್ಕಾರ

Update: 2017-01-27 16:07 IST

ಟೆಹರಾನ್, ಜ. 27: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಸ್ಲಿಮ್ ವಲಸಿಗರ ಮೇಲೆ ವಿಧಿಸಿರುವ ‘ಜನಾಂಗೀಯವಾದಿ’ ನಿಷೇಧವನ್ನು ಪತ್ರಿಭಟಿಸಿ ತಾನು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇರಾನ್‌ನ ಚಿತ್ರ ನಟಿ ತರನೀಹ್ ಅಲಿದೂಸ್ತಿ ಗುರುವಾರ ಹೇಳಿದ್ದಾರೆ.ಅವರ ನಟನೆಯ ಚಿತ್ರ ‘ದ ಸೇಲ್ಸ್‌ಮನ್’ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.‘‘ಟ್ರಂಪ್ ಇರಾನಿಯನ್ನರಿಗೆ ವೀಸಾ ನಿರಾಕರಿಸಿರುವುದು ಜನಾಂಗೀಯವಾದಿಯಾಗಿದೆ.

ಇದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು ಇದನ್ನು ಪ್ರತಿಭಟಿಸಿ 2017ರ ಅಕಾಡಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗುವುದಿಲ್ಲ’’ ಎಂದು ನಟಿ ಟ್ವೀಟ್ ಮಾಡಿದ್ದಾರೆ.ಇರಾನ್‌ನ ಖ್ಯಾತ ನಿರ್ದೇಶಕ ಅಸ್ಘರ್ ಫರ್ಹಾದಿ ಅವರ ಚಿತ್ರ ‘ದ ಸೇಲ್ಸ್‌ಮನ್’ ಆಸ್ಕರ್ ಪ್ರಶಸ್ತಿಯ ವಿದೇಶಿ ಭಾಷೆಯ ಶ್ರೇಷ್ಠ ಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ.89ನೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 26ರಂದು ನಡೆಯಲಿದೆ.

‘ವಾಶಿಂಗ್ಟನ್ ಪೋಸ್ಟ್’ ಮತ್ತು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗಳು ಪ್ರಕಟಿಸಿರುವ ಕರಡು ಸರಕಾರಿ ಆದೇಶವೊಂದರ ಪ್ರಕಾರ, ಇರಾಕ್, ಸಿರಿಯ, ಇರಾನ್, ಸುಡಾನ್, ಲಿಬಿಯ, ಸೊಮಾಲಿಯ ಮತ್ತು ಯಮನ್‌ಗಳಿಂದ ಬರುವ ವೀಸಾ ಅರ್ಜಿಗಳನ್ನು ಒಂದು ತಿಂಗಳ ಕಾಲ ತಡೆಹಿಡಿಯಲಾಗುವುದು.ಅದೇ ವೇಳೆ, ನಿರಾಶ್ರಿತರಿಗಾಗಿ ಅಮೆರಿಕ ನಡೆಸುತ್ತಿರುವ ಯೋಜನೆಗಳನ್ನು ನಾಲ್ಕು ತಿಂಗಳ ಅವಧಿಗೆ ಸ್ಥಗಿತಗೊಳಿಸುವ ಪ್ರಸ್ತಾಪವನ್ನೂ ಕರಡು ಆದೇಶಗಳು ಹೊಂದಿವೆ.ಈ ಸರಕಾರಿ ಆದೇಶಗಳು ಇನ್ನಷ್ಟೇ ಅಧಿಕೃತವಾಗಿ ಜಾರಿಗೆ ಬರಬೇಕಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News