×
Ad

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಹಿಜಾಬ್ ಧಾರಿಣಿ ಮೇಲೆ ದಾಳಿ

Update: 2017-01-27 17:20 IST

ನ್ಯೂಯಾರ್ಕ್, ಜ. 27: ಅಮೆರಿಕದ ಡೆಲ್ಟಾ ಏರ್‌ಲೈನ್ ವಿಮಾನಯಾನ ಕಂಪೆನಿಯ ಹಿಜಾಬ್‌ಧಾರಿ ಮುಸ್ಲಿಮ್ ಉದ್ಯೋಗಿಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಇಲ್ಲಿನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಾಂಗೀಯ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ವರ್ಸೆಸ್ಟರ್ ನಿವಾಸಿ 57 ವರ್ಷದ ರಾಬಿನ್ ರೋಡ್ಸ್ ಎಂಬಾತನು ರಬೀಯಾ ಖಾನ್‌ರನ್ನು ಜನಾಂಗೀಯವಾಗಿ ನಿಂದಿಸಿದ ಬಳಿಕ ಅವರನ್ನು ತುಳಿದನು ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ಈಗ ಇಲ್ಲಿ ಟ್ರಂಪ್ ಇದ್ದಾರೆ. ಅವರು ನಿಮ್ಮೆಲ್ಲರನ್ನೂ ಹೊರಗಟ್ಟುತ್ತಾರೆ’’ ಎಂದು ಆ ವ್ಯಕ್ತಿ ಹೇಳಿದ್ದಾಗಿ ವರದಿಯಾಗಿದೆ.

ರಬೀಯಾ ಖಾನ್ ಬುಧವಾರ ವಿಮಾನ ನಿಲ್ದಾಣದ ಡೆಲ್ಟಾ ಸ್ಕೈ ಲಾಂಜ್‌ನಲ್ಲಿರುವ ತನ್ನ ಕಚೇರಿಯಲ್ಲಿ ಕುಳಿತಿದ್ದಾಗ ರಾಬಿನ್ ರೋಡ್ಸ್ ಅಲ್ಲಿಗೆ ಬಂದನು. ಅರುಬದಿಂದ ಬಂದಿದ್ದ ಆತ ಮ್ಯಾಸಚುಸೆಟ್ಸ್‌ಗೆ ಹೋಗುವ ಸಂಪರ್ಕ ವಿಮಾನಕ್ಕಾಗಿ ಕಾಯುತ್ತಿದ್ದನು.

ರಬೀಯಾ ಬಳಿಗೆ ಬಂದ ಆತ, ‘‘ನೀವು ಮಲಗಿದ್ದೀರಾ? ಅಥವಾ ಪ್ರಾರ್ಥನೆ ಮಾಡುತ್ತಿದ್ದೀರಾ?’’ ಎಂದು ಪ್ರಶ್ನಿಸಿದನು ಎಂದು ಕ್ವೀನ್ಸ್ ಡಿಸ್ಟ್ರಿಕ್ಟ್ ಅಟಾರ್ನಿ ರಿಚರ್ಡ್ ಎ. ಬ್ರೌನ್ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬಳಿಕ ಆತ ರಬೀಯಾರಿಗೆ ಮುಷ್ಟಿಯಿಂದ ಗುದ್ದಿದನು. ಆದರೆ, ಅದು ಗುರಿ ತಪ್ಪಿ ಆಕೆ ಕುಳಿತಿದ್ದ ಕುರ್ಚಿಯ ಹಿಂಬದಿಗೆ ತಾಗಿತು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಅದಕ್ಕೆ ಪ್ರತಿಕ್ರಿಯಿಸಿದ ರಬೀಯಾ, ‘‘ನೀವು ನನಗೆ ಯಾಕೆ ಹೊಡೆಯುತ್ತಿದ್ದೀರಿ?’’ ಎಂದು ಪ್ರಶ್ನಿಸಿದರು. ‘‘ನೀವು ಏನೂ ಮಾಡಿಲ್ಲ, ಆದರೆ ನಾನು ನಿನಗೆ ಒದೆಯ ಬಯಸುತ್ತೇನೆ’’ ಎಂದು ದುಷ್ಕರ್ಮಿಯು ಉತ್ತರಿಸಿದನು.

ಬಳಿಕ ಆತ ರಬೀಯಾಗೆ ಒದ್ದನು. ಆಗ ರಬೀಯಾ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತ ಬಾಗಿಲಿಗೆ ಒದ್ದನು ಹಾಗೂ ಆಕೆ ಹೊರ ಹೋಗದಂತೆ ತಡೆದನು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಇನ್ನೋರ್ವ ವ್ಯಕ್ತಿ ದುಷ್ಕರ್ಮಿಯನ್ನು ಸಮಾಧಾನಪಡಿಸಲು ಯತ್ನಿಸಿದಾಗ, ಆತ ಬಾಗಿಲಿನಿಂದ ದೂರ ಸರಿದನು. ಆಗ ರಬೀಯಾ ಅಲ್ಲಿಂದ ಓಡಿ ತಪ್ಪಿಸಿಕೊಂಡರು ಎಂದು ಹೇಳಿಕೆ ತಿಳಿಸಿದೆ.

ಆಗಲೂ ಬೆಂಬಿಡದ ರೋಡ್ಸ್ ಆಕೆಯನ್ನು ಹಿಂಬಾಲಿಸಿನು. ಬಳಿಕ ಮಂಡಿಯೂರಿ ಕುಳಿತುಕೊಂಡು, ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿಯಲ್ಲಿ ಬಗ್ಗಿದನು. ಬಳಿಕ, ‘‘ಇಸ್ಲಾಮ್, ಐಸಿಸ್ ಕೇಳಿ, ಡೊನಾಲ್ಡ್ ಟ್ರಂಪ್ ಇಲ್ಲಿದ್ದಾರೆ. ಅವರು ನಿಮ್ಮೆಲ್ಲರನ್ನೂ ಹೊರಗಟ್ಟುತ್ತಾರೆ. ಇಂಥ ಜನರ ಬಗ್ಗೆ ನೀವು ಜರ್ಮನಿ, ಬೆಲ್ಜಿಯಂ ಮತ್ತು ಫ್ರಾನ್ಸನ್ನು ಕೇಳಬಹುದು. ಅವರು ಏನು ಹೇಳುತ್ತಾರೆ ಎನ್ನುವುದು ನಿಮಗೆ ಗೊತ್ತಾಗುತ್ತದೆ’’ ಎಂದು ರೋಡ್ಸ್ ಹೇಳಿದನೆನ್ನಲಾಗಿದೆ.

ದುಷ್ಕರ್ಮಿಯ ವಿರುದ್ಧ ಹಲವು ಆರೋಪಗಳನ್ನು ಹೊರಿಸಿ ಮೊಕದ್ದಮೆ ದಾಖಲಿಸಲಾಗಿದೆ. ಆತನ ವಿರುದ್ಧದ ಆರೋಪಗಳು ಸಾಬೀತಾದರೆ, ಆತನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News