‘ಒಂದೇ ಓವರ್‌ನಲ್ಲಿ ಆರು ವಿಕೆಟ್’
ಮೆಲ್ಬೋರ್ನ್, ಜ.27: ಬ್ಯಾಟಿಂಗ್‌ನಲ್ಲಿ ಓವರ್‌ವೊಂದರಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದರೆ ಅದೊಂದು ಪರಿಪೂರ್ಣ ಪ್ರದರ್ಶನ ಎನಿಸಿಕೊಳ್ಳುತ್ತದೆ. ಸರ್ ಗ್ಯಾರಿಫೀಲ್ಡ್ ಸೋಬರ್ಸ್, ರವಿ ಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್ ಹಾಗೂ ಅಲೆಕ್ಸ್ ಹೇಲ್ಸ್ ಈ ಮಹತ್ವದ ಸಾಧನೆ ಮಾಡಿರುವ ಪ್ರಮುಖ ಕ್ರಿಕೆಟಿಗರಾಗಿದ್ದಾರೆ.
ಸೋಬರ್ಸ್, ಶಾಸ್ತ್ರಿ ಹಾಗೂ ಹೇಲ್ಸ್ ದೇಶೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದರೆ, ಗಿಬ್ಸ್ ಹಾಗೂ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದರು. ಈ ಎಲ್ಲ ಸ್ಟಾರ್ ಕ್ರಿಕೆಟಿಗರು ಹಲವು ಪ್ರಮುಖ ಸಾಧನೆ ಮಾಡಿದ್ದರೂ ಅಭಿಮಾನಿಗಳು ಅವರನ್ನು ಓವರ್‌ವೊಂದರಲ್ಲಿ ಸಿಡಿಸಿದ ಆರು ಸಿಕ್ಸರ್‌ಗಳ ಮೂಲಕ ನೆನಪಿಸಿಕೊಳ್ಳುತ್ತಾರೆ.
ಕುತೂಹಲಕಾರಿ ವಿಷಯವೆಂದರೆ ಆಸ್ಟ್ರೇಲಿಯದ ಕ್ಲಬ್ ಕ್ರಿಕೆಟಿಗನೊಬ್ಬ ಒಂದೇ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಉಡಾಯಿಸಿ ಓವರ್‌ವೊಂದರಲ್ಲಿ ಆರು ಸಿಕ್ಸರ್ ಬಾರಿಸಿರುವ ಬ್ಯಾಟ್ಸ್‌ಮನ್‌ಗೆ ಸಮನಾದ ಸಾಧನೆ ತೋರಿದ್ದಾರೆ.
ಗೋಲ್ಡನ್ ಪಾಯಿಂಟ್ ಕ್ರಿಕೆಟ್ ಕ್ಲಬ್‌ನ ಅಲೆಡ್ ಕೆರಿ ಬೌಲಿಂಗ್‌ನಲ್ಲಿ ಕರಾಮತ್ತು ತೋರಿರುವ ಬೌಲರ್ ಆಗಿದ್ದಾರೆ. ಅಲೆಡ್ ವಿಕ್ಟೋರಿಯದಲ್ಲಿ ನಡೆದ ಬಲ್ಲಾರ್ಟ್ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಪಂದ್ಯದಲ್ಲಿ 29ರ ಹರೆಯದ ಅಲೆಡ್ ಮೊದಲ 8 ಓವರ್‌ಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದರು. ಆದರೆ ತಾನೆಸೆದಿದ್ದ 9ನೆ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿ ಈಸ್ಟ್ ಬಲ್ಲಾರ್ಟ್ ತಂಡವನ್ನು ಕೇವಲ 40 ರನ್‌ಗೆ ಆಲೌಟ್ ಮಾಡಿದರು.
ಕೆರಿ ಮೊದಲ ಹಾಗೂ ಎರಡನೆ ವಿಕೆಟ್‌ಗಳನ್ನು ಕ್ರಮವಾಗಿ ಮೊದಲ ಸ್ಲಿಪ್ ಹಾಗೂ ವಿಕೆಟ್‌ಕೀಪರ್ ಪಡೆದ ಕ್ಯಾಚ್ ಮೂಲಕ ಪಡೆದರು. 3ನೆ ವಿಕೆಟ್ ಎಲ್ಬಿಡಬ್ಲು ಮೂಲಕ, ಉಳಿದ 3 ವಿಕೆಟ್‌ಗಳನ್ನು ಕ್ಲೀನ್‌ಬೌಲ್ಡ್ ಮೂಲಕ ಉಡಾಯಿಸಿದರು.
‘‘ನಾನು ಈಗಲೂ ಆಘಾತದಿಂದ ಹೊರಬಂದಿಲ್ಲ. ಇಂತಹ ಸಂದರ್ಭ ಎಲ್ಲ ಸಮಯದಲ್ಲೂ ಒದಗಿಬರುವುದಿಲ್ಲ. ನನ್ನ ಪ್ರಕಾರ ನನಗಿದು ಅದೃಷ್ಟದ ದಿನವಾಗಿತ್ತು. ಮತ್ತೊಮ್ಮೆ ನಾನು ಈ ಸಾಧನೆ ಮಾಡುತ್ತೇನೆಂಬ ನಂಬಿಕೆಯಿಲ್ಲ’’ ಎಂದು ‘ದಿ ಕೊರಿಯರ್ ಸ್ಪೋರ್ಟ್’ಗೆ ಕೆರಿ ತಿಳಿಸಿದ್ದಾರೆ.
ಕೆರಿ ಅವರ ಅದ್ಭುತ ಪ್ರದರ್ಶನದ ಸುದ್ದಿ ಕಾಡ್ಗಿಚ್ಚಿನಂತೆ ಆಸ್ಟ್ರೇಲಿಯ ಹಾಗೂ ವಿಶ್ವದೆಲ್ಲೆಡೆ ಪಸರಿಸಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹದ್ದೊಂದು ಸಾಧನೆ ಇನ್ನೂ ದಾಖಲಾಗಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರ್‌ರೊಬ್ಬ ಓವರ್‌ವೊಂದರಲ್ಲಿ ಗರಿಷ್ಠ 4 ವಿಕೆಟ್ ಕಬಳಿಸಿದ್ದಾರೆ.