×
Ad

ಜಗತ್ತು ಪರಮಾಣು ಯುದ್ಧಕ್ಕೆ ಸಿದ್ಧಗೊಳ್ಳುತ್ತಿರುವಂತೆ ಕಾಣುತ್ತಿದೆ : ಮಿಖೈಲ್ ಗೊರ್ಬಚೆವ್

Update: 2017-01-27 18:51 IST

ನ್ಯೂಯಾರ್ಕ್, ಜ. 27: ಹೊಸದಾಗಿ ಶಸ್ತ್ರಾಸ್ತ್ರ ಸ್ಪರ್ಧೆಯೆಂದರೆ ಜಗತ್ತು ಮತ್ತೆ ಪರಮಾಣು ಬೆದರಿಕೆಯ ತೆಕ್ಕೆಗೆ ಜಾರಿದೆ ಎಂದರ್ಥ ಎಂದು ಸೋವಿಯತ್ ಒಕ್ಕೂಟದ ಮಾಜಿ ಅಧ್ಯಕ್ಷ ಮಿಖೈಲ್ ಗೊರ್ಬಚೆವ್ ಎಚ್ಚರಿಸಿದ್ದಾರೆ.

ಜಗತ್ತು ಯುದ್ಧಕ್ಕೆ ತಯಾರಿ ನಡೆಸುತ್ತಿರುವಂತೆ ಕಾಣುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

ಜಗತ್ತಿನ ಪರಮಾಣು ಅಸ್ತ್ರಗಳ ಪ್ರಮಾಣವನ್ನು ಕಡಿಮೆ ಮಾಡಲು ಜೊತೆಯಾಗಿ ಶ್ರಮಿಸುವಂತೆ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರಿಗೆ ಕರೆ ನೀಡಿದ್ದಾರೆ.

‘‘ರಾಜಕಾರಣಿಗಳು ಮತ್ತು ಸೇನಾ ನಾಯಕರು ದಿನೇ ದಿನೇ ಹಠಮಾರಿಗಳಾಗುತ್ತಿದ್ದಾರೆ ಹಾಗೂ ಅವರ ರಕ್ಷಣಾ ಸಿದ್ಧಾಂತಗಳು ಹೆಚ್ಚೆಚ್ಚು ಅಪಾಯಕಾರಿಯಾಗುತ್ತಿವೆ. ವೀಕ್ಷಕರು ಮತ್ತು ಟಿವಿ ನಿರೂಪಕರು ಈ ಹಠಮಾರಿ ಗುಂಪಿಗೆ ಸೇರುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ಜಗತ್ತು ಯುದ್ಧಕ್ಕೆ ತಯಾರಾಗುತ್ತಿರುವಂತೆ ಕಾಣುತ್ತಿದೆ’’ ಎಂದು ‘ಟೈಮ್’ ನಿಯತಕಾಲಿಕಕ್ಕೆ ಬರೆದ ಲೇಖನವೊಂದರಲ್ಲಿ ಅವರು ಹೇಳಿದ್ದಾರೆ.

ಪರಮಾಣು ಸಂಘರ್ಷದ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯವೊಂದನ್ನು ಮಂಡಿಸಲು ಅಮೆರಿಕ ಮತ್ತು ರಶ್ಯದ ಅಧ್ಯಕ್ಷರು ನೇತೃತ್ವ ವಹಿಸಬೇಕು ಎಂದು ಅವರು ಕರೆ ನೀಡಿದರು.

‘‘ಇಂಥ ನಿರ್ಣಯವೊಂದನ್ನು ಅಂಗೀಕರಿಸಲು ಡೊನಾಲ್ಡ್ ಟ್ರಂಪ್ ಮತ್ತು ಪುಟಿನ್ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನನಗನಿಸುತ್ತದೆ. ಯಾಕೆಂದರೆ ಜಗತ್ತಿನ ಒಟ್ಟು ಪರಮಾಣು ಶಸ್ತ್ರಗಳ 90 ಶೇಕಡಕ್ಕೂ ಅಧಿಕ ಸಂಗ್ರಹವನ್ನು ಅವರ ಎರಡು ದೇಶಗಳು ಹೊಂದಿವೆ. ಹಾಗಾಗಿ, ಅವರ ಮೇಲೆ ವಿಶೇಷ ಜವಾಬ್ದಾರಿಯಿದೆ’’ ಎಂದು ಸೋವಿಯತ್ ಒಕ್ಕೂಟದ ಮಾಜಿ ಅಧ್ಯಕ್ಷ ಬರೆದಿದ್ದಾರೆ.

ಶೀತಲ ಸಮರ ಕೊನೆಗೊಳ್ಳುತ್ತಿದ್ದ 1980ರ ದಶಕದಲ್ಲಿ ಜಗತ್ತನ್ನು ಪರಮಾಣು ಅಸ್ತ್ರ ಮುಕ್ತಗೊಳಿಸಲು ಸ್ವತಃ ತಾನು ತೆಗೆದುಕೊಂಡಿದ್ದ ಕ್ರಮಗಳನ್ನು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News