×
Ad

ಶಾಲೆಗಳಲ್ಲಿ ಎಚ್‌ಐವಿ ಬಾಧಿತ ವಿದ್ಯಾರ್ಥಿಗಳ ಕಡೆಗಣನೆ: ಪ್ರತಿಕ್ರಿಯೆ ನೀಡಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಸೂಚನೆ

Update: 2017-01-27 19:50 IST

ಹೊಸದಿಲ್ಲಿ, ಜ.27: ಪ್ರವೇಶ ನಿರಾಕರಣೆ, ಶಾಲೆಯಿಂದ ಉಚ್ಛಾಟನೆ, ಇತರ ಮಕ್ಕಳಿಂದ ಬೇರ್ಪಡಿಸುವುದು, ಟಾಯ್ಲೆಟ್ ಮತ್ತು ಬಾಥ್‌ರೂಂ ಸ್ವಚ್ಛಗೊಳಿಸುವಂತೆ ಸೂಚಿಸುವುದು- ಇವು ಎಚ್‌ಐವಿ ಬಾಧಿತ ವಿದ್ಯಾರ್ಥಿಗಳನ್ನು ಶಾಲೆಗಳು ನಡೆಸಿಕೊಳ್ಳುತ್ತಿರುವ ರೀತಿ.

ಈ ಬಗ್ಗೆ ನಾಝ್ ಫೌಂಡೇಷನ್ (ಇಂಡಿಯಾ) ಎಂಬ ಎನ್‌ಜಿಒ ಸಂಸ್ಥೆ ಅರ್ಜಿ ಸಲ್ಲಿಸಿ ಸುಪ್ರೀಂಕೋರ್ಟ್‌ನ ಗಮನ ಸೆಳೆದಿದೆ. ದೇಶದಲ್ಲಿ ಏಡ್ಸ್‌ಗೆ ಸಂಬಂಧಿಸಿದಂತೆ ಘಟಿಸುವ ಮರಣ ಪ್ರಮಾಣದಲ್ಲಿ ಶೇ.7ರಷ್ಟು ಎಚ್‌ಐವಿ ಬಾಧಿತ ವಿದ್ಯಾರ್ಥಿಗಳಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

 ಶಿಕ್ಷಣವು ಮೂಲಭೂತ ಹಕ್ಕಾಗಿದ್ದರೂ ಮಕ್ಕಳನ್ನು ಈ ರೀತಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಕೇಂದ್ರ ಸರಕಾರ ತಕ್ಷಣ ಪ್ರತಿಕ್ರಿಯೆ ನೀಡಬೇಕೆಂದು ಮುಖ್ಯ ನ್ಯಾಯಾಧೀಶ ಜೆ.ಎಸ್.ಖೇಹರ್ ಅವರ ನೇತೃತ್ವದ ಪೀಠವೊಂದು ತಿಳಿಸಿದೆ.

ದೇಶದಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ (2011ರ ವೇಳೆಗೆ) ಸುಮಾರು 20.9 ಲಕ್ಷವಾ ಗಿದ್ದು ಇದರಲ್ಲಿ 15ರ ಕೆಳಹರೆಯದ ಮಕ್ಕಳ ಸಂಖ್ಯೆ ಶೇ.7ರಷ್ಟು ಅಂದರೆ 1.45 ಲಕ್ಷ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ನ್ಯಾಕೊ) ತಿಳಿಸಿದೆ.

  ಭಾರತದಲ್ಲಿ ಎಚ್‌ಐವಿ ಬಾಧಿತ ಮಕ್ಕಳ ಸಂಖ್ಯೆ ಹೆಚ್ಚಿದ್ದು ಇವರನ್ನು ಶಾಲೆಗೆ ಸೇರಿಸಬೇಕಿದೆ. ಎಚ್‌ಐವಿ ಬಾಧಿತ ಮಕ್ಕಳ ಮನಸ್ಥಿತಿ ಸುಧಾರಿಸುವಲ್ಲಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತವೆ. ಉತ್ತಮ ಶಾಲಾ ಶಿಕ್ಷಣ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಉತ್ತಮ ಉದ್ಯೋಗದ ಅವಕಾಶ ದೊರಕಿಸಿಕೊಡುತ್ತದೆ.ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುತ್ತದೆ ಎಂದು ಎನ್‌ಜಿಒ ಸಂಸ್ಥೆಯ ಪ್ರತಿನಿಧಿ ವಕೀಲರಾದ ಆನಂದ್ ಗ್ರೋವರ್ ಮತ್ತು ಪುರುಷೋತ್ತಮ್ ಶರ್ಮ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ.

  ಎಚ್‌ಐವಿ ಬಾಧಿತ ವಿದ್ಯಾರ್ಥಿಗಳನ್ನು ಅವಹೇಳನಕಾರಿಯಾಗಿ ನಡೆಸಿಕೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಇವರನ್ನು ಇತರ ವಿದ್ಯಾರ್ಥಿಗಳಿಂದ ಪ್ರತ್ಯೇಕಿಸಲಾಗುತ್ತದೆ ಮತ್ತು ಟಾಯ್ಲೆಟ್, ಬಾಥ್‌ರೂಂ ಸ್ವಚ್ಛಗೊಳಿಸಲು ತಿಳಿಸಲಾಗುತ್ತಿದೆ. ಇದು ಸಂವಿಧಾನದ 21,21ಎ ಮತ್ತು 14ನೆಯ ಪರಿಚ್ಛೇದದಲ್ಲಿ ತಿಳಿಸಲಾಗಿರುವ ಮಕ್ಕಳ ಸ್ವಾಯುತ್ತತೆ, ಘನತೆ ಮತ್ತು ಖಾಸಗಿತದ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News