ಜಲ್ಲಿಕಟ್ಟು ಪರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಸಮಾಜಘಾತುಕ ಶಕ್ತಿಗಳು ಕಾರಣ: ಪನ್ನೀರ್‌ಸೆಲ್ವಂ
ಚೆನ್ನೈ, ಜ.27: ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ಜಲ್ಲಿಕಟ್ಟು ಪರ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಯಲು ಕೆಲವು ದುಷ್ಟ ಶಕ್ತಿಗಳೇ ಕಾರಣ ಎಂದು ತಮಿಳುನಾಡು ಸರಕಾರ ತಿಳಿಸಿದೆ.
ರಾಷ್ಟ್ರವಿರೋಧಿ, ಸಮಾಜಘಾತುಕ ಮತ್ತು ತೀವ್ರವಾದಿ ಶಕ್ತಿಗಳು ಜಲ್ಲಿಕಟ್ಟು ಪರವಾಗಿ ನಡೆದ ಪ್ರತಿಭಟನೆಯಲ್ಲಿ ಸೇರಿಕೊಂಡು , ಪ್ರತಿಭಟನೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದು ಈ ದುಷ್ಟಶಕ್ತಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಹೇಳಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವೇನು ಮತ್ತು ಪೊಲೀಸರು ಲಾಠಿಚಾರ್ಜ್ ನಡೆಸಿರುವ ಬಗ್ಗೆ ಸರಕಾರದ ನಿಲುವೇನು ಎಂದು ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ರಾಜ್ಯ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪನ್ನೀರ್‌ಸೆಲ್ವಂ ಉತ್ತರ ನೀಡುತ್ತಿದ್ದರು.
ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಾರ್ವಜನಿಕರು ಸೇರಿಕೊಂಡು ನಡೆಸಿದ ಪ್ರತಿಭಟನೆಯ ಪರವಾಗಿ ಸರಕಾರ ಕಾನೂನಿನ ರೀತಿ ನಡೆದುಕೊಂಡು ಜಲ್ಲಿಕಟ್ಟು ಬೆಂಬಲಿಸಿ ಮಸೂದೆ ಅಂಗೀಕರಿಸಿತು. ಇದು ಪ್ರತಿಭಟನೆಗೆ ಸಂದ ಯಶಸ್ಸು ಆಗಿತ್ತು. ಆದರೆ ದುಷ್ಟಶಕ್ತಿಗಳು ಪ್ರತಿಭಟನೆಯನ್ನು ಅಂತ್ಯಗೊಳಿಸದಂತೆ ದಾರಿ ತಪ್ಪಿಸಿದವು. ಪೊಲೀಸರ ಮೇಲೆ ಆಕ್ರಮಣ ನಡೆಸಿ, ಹಿಂಸಾಚಾರದ ಮೂಲಕ ಸಾರ್ವಜನಿರ ಪ್ರಾಣಕ್ಕೆ ಮತ್ತು ಆಸ್ತಿಗೆ ಹಾನಿ ಎಸಗಲು ಮುಂದಾದರು.
ಗುಂಪಿನಿಂದ ಹಲ್ಲೆಗೊಳಗಾಗಿ ಕಲ್ಲಿನೇಟಿಗೆ ಸಿಲುಕಿದರೂ ಪೊಲೀಸರು ಅತ್ಯಂತ ಸಂಯಮದಿಂದ ವರ್ತಿಸಿ, ಕನಿಷ್ಠ ಬಲ ಪ್ರಯೋಗಿಸಿದ್ದಾರೆ. ಗೋಲೀಬಾರ್ ಅಥವಾ ಲಾಠೀಚಾರ್ಜ್ ನಡೆಸಿಲ್ಲ ಎಂದು ಅವರು ತಿಳಿಸಿದರು.
ಗಣರಾಜ್ಯೋತ್ಸವ ದಿನಾಚರಣೆಯವರೆಗೂ ಪ್ರತಿಭಟನೆ ಮುಂದುವರಿಯಬೇಕು ಎಂದು ಕೆಲ ಪ್ರತಿಭಟನಾಕಾರರು ಯೋಜನೆ ಹಾಕಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ಜನವರಿ 26ರಂದು ಕರಿಪತಾಕೆ ಪ್ರದರ್ಶಿಸುವ ಮೂಲಕ ಸಮಸ್ಯೆ ಸೃಷ್ಟಿಸಲು ಕೆಲವರು ಬಯಸಿದ್ದರು. ಪ್ರತಿಭಟನೆಯ ಸಂದರ್ಭ ಕೆಲವರು ಪ್ರತ್ಯೇಕ ತಮಿಳುನಾಡು ರಾಷ್ಟ್ರದ ಬೇಡಿಕೆಯ ಘೋಷಣೆ ಕೂಗಿದ್ದರು. ಕೆಲವರು ಉಸಾಮ ಬಿನ್ ಲಾದನ್ ಫೋಟೋ ಹಿಡಿದುಕೊಂಡು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವ ಘೋಷಣೆ ಕೂಗುತ್ತಿದ್ದರು. ಹಲವು ಆಕ್ಷೇಪಾರ್ಹ ಘೋಷಣೆಗಳನ್ನೂ ಕೂಗಲಾಗಿದೆ. ಈ ಬಗ್ಗೆ ಸಾಕ್ಷಿ ಇದ್ದು ದುಷ್ಟಶಕ್ತಿಗಳನ್ನು ಗುರುತಿಸಿ ಶಿಕ್ಷಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.