ನಾವು ರಾಜೀನಾಮೆ ಪತ್ರ ಹೊತ್ತುಕೊಂಡೇ ತಿರುಗುತ್ತಿದ್ದೇವೆ: ಶಿವಸೇನೆ ಸಚಿವ
ಮುಂಬೈ,ಜ.27: ತಾನು ಮತ್ತು ಬಿಜೆಪಿ ನೇತೃತ್ವದ ಸರಕಾರದಲ್ಲಿನ ತನ್ನ ಸಹೋದ್ಯೋಗಿಗಳು ರಾಜೀನಾಮೆ ಪತ್ರಗಳನ್ನು ಜೇಬಿನಲ್ಲಿ ಇಟ್ಟುಕೊಂಡೇ ತಿರುಗುತ್ತಿದ್ದೇವೆ ಮತ್ತು ಅವುಗಳನ್ನು ಸಲ್ಲಿಸಲು ಪಕ್ಷದ ವರಿಷ್ಠ ಉದ್ಧವ್ ಠಾಕ್ರೆಯವರ ನಿರ್ದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಶಿವಸೇನೆಯ ಹಿರಿಯ ನಾಯಕ ಹಾಗೂ ರಾಜ್ಯದ ಸಚಿವ ರಾಮದಾಸ ಕದಂ ಅವರು ಶುಕ್ರವಾರ ಇಲ್ಲಿ ಹೇಳಿದರು. ಮಹಾರಾಷ್ಟ್ರದಲ್ಲಿ ಪೌರ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡಲು ಪಕ್ಷವು ಗುರುವಾರ ನಿರ್ಧರಿಸಿತ್ತು.
ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುನ್ನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರೆದಿರುವ ಸರ್ವಪಕ್ಷ ಸಂಸದರ ಸಭೆಯನ್ನು ಬಹಿಷ್ಕರಿಸಲೂ ಶಿವಸೇನೆಯ ಸಂಸದರು ನಿರ್ಧರಿಸಿದ್ದಾರೆ ಎಂದು ಕದಂ ತಿಳಿಸಿದರು.
ಬೃಹನ್ಮುಂಬೈ ಮಹಾನಗರ ಪಾಲಿಕೆ ಮತ್ತು ರಾಜ್ಯದ ಇತರ ಪೌರ ಸಂಸ್ಥೆಗಳಿಗೆ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಕುರಿತಂತೆ ಹಲವಾರು ದಿನಗಳ ಅನಿಶ್ಚಿತತೆಯ ಬಳಿಕ ಠಾಕ್ರೆ ಅವರು ತನ್ನ ಪಕ್ಷವು ಏಕಾಂಗಿಯಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ ಎಂದು ನಿನ್ನೆ ಪ್ರಕಟಿಸಿದ್ದರು. ಆದರೆ ರಾಜ್ಯದಲ್ಲಿಯ ಸಮ್ಮಿಶ್ರ ಸರಕಾರದ ಪಾಲುದಾರನಾಗಿ ಪಕ್ಷವು ಮುಂದುವರಿ ಯಲಿದೆಯೇ ಎಂಬ ಬಗ್ಗೆ ಶಿವಸೇನೆ ಬಾಯಿಬಿಟ್ಟಿಲ್ಲ.